ಸೋಮವಾರಪೇಟೆ, ಜ. ೨೮: ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಇಲ್ಲಿನ ಎಸ್ಜೆಎಂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಿತು.
ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ನವೀನ್ ಮಾತನಾಡಿ, ೧೮ ವರ್ಷ ಒಳಗಿನ ಮಕ್ಕಳು ಯಾವದೇ ರೀತಿಯ ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಲ್ಲಿ ಉಚಿತ ಸಹಾಯವಾಣಿ ೧೦೯೮ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮಾತನಾಡಿ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗುರುಬಸಮ್ಮ ಅವರು ಬಾಲ್ಯ ವಿವಾಹದ ದುಷ್ಪರಿಣಾಮಗಳು, ಮುಖ್ಯೋಪಾಧ್ಯಾಯ ಬಸವನಗೌಡ ಅವರು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಕೆ. ಕುಮಾರಿ, ದಮಯಂತಿ, ಯೋಗೇಶ್, ಪ್ರೌಢಶಾಲಾ ಮುಖ್ಯಶಿಕ್ಷಕಿ ರಾಣಿ, ಅಂಗನವಾಡಿ ಕಾರ್ಯಕರ್ತೆಯರಾದ ತಾರಾ, ಉಷಾ, ಜಗದಾಂಭ ಸೇರಿದಂತೆ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.