ಮಡಿಕೇರಿ, ಜ. ೨೭: ಮಡಿಕೇರಿ ಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕದಿಂದ ಕೃಷಿ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವ ವಿಸ್ತರಣಾ ಚಟುವಟಿಕೆಯ ಭಾಗವಾಗಿ ತಾ. ೨೮ರಿಂದ (ಇಂದಿ ನಿಂದ) ಫೆಬ್ರವರಿ ೩ನೇ ತಾರೀಖಿನವರೆಗೆ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಒಟ್ಟು ಆರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ದಿನವು ಕೃಷಿ ಮತ್ತು ಕೃಷಿಗೆ ಪೂರಕವಾದ ವಿಚಾರಗಳ ಬಗ್ಗೆ ತರಬೇತಿ, ವಿಚಾರ ವಿನಿಮಯ, ಪದ್ಧತಿ ಪ್ರಾತ್ಯಕ್ಷಿಕೆ ಇತ್ಯಾದಿಗಳನ್ನು ಆಯಾಯ ಕ್ಷೇತ್ರದ ಪರಿಣಿತರಿಂದ ಹಾಗೂ ಅನುಭವಿ ಕೃಷಿಕರ ನೆರವಿನೊಂದಿಗೆ ನಡೆಸಲಾಗುವುದು.ಈ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳ ವಿವರ ಇಂತಿದೆ:
ತಾ.೨೮ರAದು ಕೊಡಗಿನ ಹಣ್ಣುಗಳ ಮೌಲ್ಯವರ್ಧನೆ ಮತ್ತು ಪುಷ್ಪ ಕೃಷಿ ಬಗ್ಗೆ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿಯಲ್ಲಿ, ತಾ. ೨೯ರಂದು ಮೂಲಿ ಜೇನು ಸಾಕಾಣಿಕೆ ಕುರಿತು ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ, ತಾ. ೩೦ರಂದು ಅಣಬೆ ಕೃಷಿ ಮತ್ತು ಕೈತೋಟ ನಿರ್ವಹಣೆ ಕುರಿತು ಗರಗಂದೂರು, ಸುಂಟಿಕೊಪ್ಪದಲ್ಲಿ, ಫೆ.೧ರಂದು ಕೃಷಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿಯಲ್ಲಿ ಹಾಗೂ ತಾ.೨ರಂದು ಕೊಡಗು ಜಿಲ್ಲೆಗೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು ಕುರಿತಾಗಿ ಕಿರುಗೂರು ಗ್ರಾಮದ ಪ್ರಗತಿಪರ ರೈತ ಸೋಮೆಂಗಡ ತಿಮ್ಮಯ್ಯ ಅವರ ಜಮೀನಿನಲ್ಲಿ, ತಾ. ೩ರಂದು ಮಣ್ಣಿನ ಆರೋಗ್ಯ ಸಂರಕ್ಷಣೆ ಬಗ್ಗೆ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ತಂತ್ರಜ್ಞಾನ ಸಪ್ತಾಹದ ಉದ್ಘಾಟನೆಯನ್ನು ತಾ. ೨೮ರಂದು ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಿಧರ್ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯದ ಸಹವಿಸ್ತರಣಾ ನಿರ್ದೇಶಕರುಗಳಾದ ಡಾ. ಎಸ್.ಯು. ಪಾಟೀಲ್ ಹಾಗೂ ಡಾ.ಎಂ. ಶಿವಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ನಬಾರ್ಡ್ನ ಕೊಡಗು ಜಿಲ್ಲೆಯ ಪ್ರಬಂಧಕರಾದ ಶ್ರೀನಿವಾಸ್ ಪಿ.ವಿ. ವಿಶೇಷ ಆಹ್ವಾನಿತರಾಗಿರುತ್ತಾರೆ.
ಕಾರ್ಯಕ್ರಮಗಳು ಮೇಲೆ ತಿಳಿಸಿದ ಸ್ಥಳಗಳಲ್ಲಿ ಪ್ರತಿದಿನ ಬೆಳಿಗ್ಗೆ ೧೦.೩೦ ಗಂಟೆಗೆ ಆರಂಭಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ರೈತ ಮಹನೀಯರು, ಮಹಿಳೆಯರು ಹಾಗೂ ಇತರ ಆಸಕ್ತರು, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಇಲ್ಲಿಗೆ ಸಂಪರ್ಕಿಸಿ, ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. (ಕಚೇರಿ ದೂ. ೦೮೨೭೨-೨೨೫೫೩೯, ಮೊ. ಚರಣ್ ಎಂ.ಆರ್. ೯೭೩೯೪೧೩೩೩೭, ಕುಮಾರಿ ವಿದ್ಯಾಶ್ರೀ, ೯೪೮೧೩೫೦೩೧೮, ಡಾ. ಬಸವಲಿಂಗಯ್ಯ ೭೨೫೯೬೭೫೬೮೫). ಜಿಲ್ಲೆಯ ಎಲ್ಲಾ ರೈತ ಬಾಂಧವರು ತಮ್ಮ ತಮ್ಮ ಆಸಕ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆ ಕೋರಿದೆ.