ಗೋಣಿಕೊಪ್ಪ ವರದಿ, ಜ. ೨೬: ಸಮಗ್ರ ಪೋಷಕಾಂಶ ನಿರ್ವಹಣೆಯಿಂದ ಮಣ್ಣನ್ನು ಭೌತಿಕ, ರಾಸಾಯನಿಕ ಹಾಗೂ ಜೈವಿಕವಾಗಿ ಸದೃಢವಾಗಿಸಬಹುದು ಎಂದು ಕೆವಿಕೆ ತೋಟಗಾರಿಕಾ ವಿಷಯ ತಜ್ಞ ಪ್ರಭಾಕರ್ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ನರ್ಸರಿ ತರಬೇತಿ ಶಿಬಿರದಲ್ಲಿ ಸಂಪದ್ಭರಿತ ಮಣ್ಣಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ಸಾವಯವ ಗೊಬ್ಬರ, ರಸಗೊಬ್ಬರ, ಜೈವಿಕ ಗೊಬ್ಬರಗಳನ್ನು ಸಮಗ್ರವಾಗಿ ಉಪಯೋಗಿಸಿ ಅಧಿಕ ಇಳುವರಿಯ ಜತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದೇ ಸಮಗ್ರ ಪೋಷಕಾಂಶಗಳ ನಿರ್ವಹಣೆ ಎಂದು ಹೇಳಿದರು.

ಸಾವಯವ ಗೊಬ್ಬರದಲ್ಲಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಿಂಡಿಗಳು ಸೇರುತ್ತವೆ. ಕೈಗಾರಿಕೆ, ಕೃಷಿ, ನಗರದ ತ್ಯಾಜ್ಯ ವಸ್ತುಗಳನ್ನು ಕಾಂಪೋಸ್ಟೀಕರಿಸಿ ಸಾವಯುವ ಗೊಬ್ಬರ ವಾಣಿಜ್ಯವಾಗಿ ತಯಾರಿಸಲಾಗುತ್ತದೆ. ಇಂತಹ ಗೊಬ್ಬರಗಳ ಗುಣಮಟ್ಟ ಕಡಿಮೆ ಇದ್ದರೂ ದುಬಾರಿ ಇರುತ್ತದೆ. ತೋಟದಲ್ಲಿ ಸಿಗುವ ಕೃಷಿ ತ್ಯಾಜಗಳಾದ ತರಗಲೆ, ಕಾಫಿ ತ್ಯಾಜ್ಯ, ಕೊಟ್ಟಿಗೆ ಕಸ, ಕಳೆ ಉಪಯೋಗಿಸಿ ತಯಾರಿಸುವ ಹಾಗೂ ಕಡಿಮೆ ಬಂಡವಾಳದಲ್ಲಿ ತಯಾರಿಸಬಹುದಾದ ಉತ್ಕೃಷ್ಟ ಗುಣಮಟ್ಟದ ಎರೆಗೊಬ್ಬರ ಬಹಳ ಫಲದಾಯಕವಾಗಿದೆ. ದಹಿಂಚ, ಸಸ್ಬಾನಿಯ, ಗಾಂಧಿ ಗುಲಾಬಿಯನ್ನು ಹಸಿರೆಲೆ ಗೊಬ್ಬರ ವಾಗಿ ಉಪಯೋಗಿಸ ಬಹುದು. ಹಿಂಡಿ ಕೆಲವು ಪೋಷಕಾಂ± Àಗಳನ್ನು ಪೂರೈಸುವು ದಲ್ಲದೇ ಕೆಲವು ರೋಗ ಮತ್ತು ಕೀಟ ನಿರ್ವಹಣೆಯಲ್ಲಿ ಪಾತ್ರ ವಹಿಸುವುದು ಎಂದು ವಿವರಿಸಿದರು. ಈ ಸಂದರ್ಭ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮದಡಿ ಕಸಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಿದರು.