ಶ್ರೀಮಂಗಲ, ಜ. ೨೬: ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ರೈತ ತನ್ನ ಕೃಷಿ ಭೂಮಿಗೆ ನೀರು ಹಾಯಿಸಲು ೧೦ ಹೆಚ್‌ಪಿಯ ವಿದ್ಯುತ್ ಪಂಪ್ ಸೆಟ್ ಅಳವಡಿಸಿದ್ದು, ಇದಕ್ಕೆ ವಾಣಿಜ್ಯ ವ್ಯವಹಾರಕ್ಕೆ ವಿದ್ಯುತ್ ಬಳಕೆ ಎಂದು ಪರಿಗಣಿಸಿ ರೂ. ೩೦ ಸಾವಿರ ಬಿಲ್ ಹಾಕಿರುವುದನ್ನು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಖಂಡಿಸಿದ್ದು ಕೂಡಲೇ ಈ ಬಿಲ್ಲನ್ನು ವಾಪಸ್ ಪಡೆದು ಕೃಷಿ ಬಳಕೆಗೆ ಉಚಿತ ವಿದ್ಯುತ್ ನೀಡುವಂತೆ ಒತ್ತಾಯಿಸಿದೆ.

ಸಮಿತಿ ಜಿಲ್ಲಾಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರ ನೇತೃತ್ವದಲ್ಲಿ ಗೋಣಿಕೊಪ್ಪದ ಚಾಮುಂಡೇಶ್ವರಿ ವಿದ್ಯುತ್‌ಚ್ಛಕ್ತಿ ಸರಬರಾಜು ಇಲಾಖೆಯ ಎಇಇ ನೀಲಶೆಟ್ಟಿ ಅವರಿಗೆ ಲಿಖಿತ ಮನವಿ ಪತ್ರ ನೀಡಿದ್ದು, ಇಲಾಖೆಯ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದ ಮುಗ್ಧ ರೈತನಿಗೆ ಅನ್ಯಾಯವಾಗುತ್ತಿದೆ. ಕರ್ತವ್ಯ ದೋಷವೆಸಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಹರಿಹರ ಗ್ರಾಮದ ರೈತ ಬಿ.ಕೆ.ಕುಶಾಲಪ್ಪ ಅವರು ಕೃಷಿಗಾಗಿ ಅಳವಡಿಸಿರುವ ೧೦ ಹೆಚ್‌ಪಿ ಪಂಪ್ ಸೆಟ್‌ಗೆ ವಿದ್ಯುತ್ ಇಲಾಖೆಯಿಂದ ರೂ. ೩೦,೧೬೯ ಬಿಲ್ಲ್ ಬಂದಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಅಧಿಕಾರಿಗಳ ಧೋರಣೆಯಿಂದ ಬಹಳಷ್ಟು ರೈತರಿಗೆ ಅನ್ಯಾಯವಾಗುತ್ತಿದ್ದು ೧೦ ಹೆಚ್‌ಪಿಗೆ ಕೃಷಿಗೆ ಉಚಿತ ವಿದ್ಯುತ್ ನೀಡುವ ಸರಕಾರದ ಯೋಜನೆಯಿದ್ದರೂ ವಾಣಿಜ್ಯ ಬಳಕೆಯ ಬಿಲ್‌ಗಳನ್ನು ನೀಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ವಾಣಿಜ್ಯ ಬಿಲ್ ಹೇರಿ ಬಿಲ್ಲ್ ವಸೂಲಾತಿಗೆ ಮುಂದಾಗಿದ್ದು, ಇದರಿಂದ ರೈತರು ಅಲೆದಾಡುವಂತಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಎಇಇ ನೀಲಶೆಟ್ಟಿಯವರು ಇಲಾಖೆಯಿಂದ ಉಂಟಾಗಿರುವ ಲೋಪದೋಷವನ್ನು ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಯಾವ ಅಧಿಕಾರಿಯಿಂದ ತಪ್ಪಾಗಿದೆ ಎನ್ನುವುದನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಪ್ರಸ್ತುತ ನೀಡಲಾಗಿರುವ ಬಿಲ್ಲನ್ನು ತಡೆಹಿಡಿಯಲಾಗುವುದು ಹಾಗೂ ಅದನ್ನು ಪಾವತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭ ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‌ದೇವಯ್ಯ, ಕೋಳೆರ ನರೇಂದ್ರ, ಅಜ್ಜಮಾಡ ನಂಜಪ್ಪ, ಮಚ್ಚಮಾಡ ಪೂಣಚ್ಚ, ಮಲ್ಲಂಗಡ ರಂಜನ್,ಕಾಳಿಮಾಡ ತಮ್ಮುಮುತ್ತಣ್ಣ, ಬಿ.ಕೆ.ಕುಶಾಲಪ್ಪ ಮತ್ತಿತರರು ಹಾಜರಿದ್ದರು.