ಸೋಮವಾರಪೇಟೆ, ಜ. ೨೬: ಸಮೀಪದ ದೊಡ್ಡತೋಳೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದಲ್ಲಿ ಶೇಷಾಚಲ ಭಟ್ ಅವರ ಪೌರೋಹಿತ್ವದಲ್ಲಿ, ಅರ್ಚಕ ಶ್ರೀಕಾಂತ್ ಅವರ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ಕಳಾಹೋಮ, ಗಂಗಾಪೂಜೆ, ಬಲಿಪೂಜೆ, ಮಂಡಲ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿ.ಎಸ್. ಕುಶಾಲಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಪ್ರಮುಖರಾದ ಪ್ರೊ. ಯೋಗೇಂದ್ರ, ಅಭಿಯಂತರ ವೀರೇಂದ್ರ, ವಿಜಯಪ್ರಕಾಶ್ ಯುವಕ ಸಂಘದ ಅಧ್ಯಕ್ಷ ಗಿರೀಶ್, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.