ಗೋಣಿಕೊಪ್ಪ ವರದಿ, ಜ. ೨೫: ಹಾಕಿಕೂರ್ಗ್ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಲಂದೀರ ಅಪ್ಪಯ್ಯ ಜ್ಞಾಪಕಾರ್ಥ ೩ ನೇ ವರ್ಷದ ಮಹಿಳಾ ಹಾಕಿ ಲೀಗ್‌ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಕೋರಲ್ ವಾಟರ್ಸ್ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿದ್ದು, ತಾ. ೨೬ ರಂದು (ಇಂದು) ೫ ಗಂಟೆಗೆ ಹೊನಲು ಬೆಳಕಿನಲ್ಲಿ ಪಂದ್ಯ ನಡೆಯಲಿದೆ.

ಫಲಿತಾಂಶ

ಮೊದಲ ಸೆಮಿ ಫೈನಲ್‌ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಎವರ್ ಸ್ಟೋನ್ ತಂಡವನ್ನು ೫-೩ ಗೋಲುಗಳ ಅಂತರದಲ್ಲಿ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ಪಿಪಿಎಫ್ ಪರ ಎಸ್. ಡಿ. ಸಂಧ್ಯಾ ೧೦, ೧೭, ೪೯ ನೇ ನಿಮಿಷಗಳಲ್ಲಿ ಮೂರು ಗೋಲು ಹೊಡೆದು ಗೆಲುವಿನ ರೂವಾರಿಯಾದರು. ೧೫ ನೇ ನಿಮಿಷದಲ್ಲಿ ಶಯಾ, ೨೮ ನೇ ನಿಮಿಷದಲ್ಲಿ ಪೂಜಿತಾ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸುವಲ್ಲಿ ಸಫಲರಾದರು. ಎವರ್ ಸ್ಟೋನ್ ಪರ ೨ ನೇ ನಿಮಿಷದಲ್ಲಿ ಎಂ. ಪಾರ್ವತಿ, ೭ ನೇ ನಿಮಿಷದಲ್ಲಿ ದೇಚಮ್ಮ, ೩೩ ನೇ ನಿಮಿಷದಲ್ಲಿ ಪೂಜಾ ತಲಾ ಒಂದೊAದು ಗೋಲು ಹೊಡೆದರು. ಪೂರ್ವಾರ್ಧದಲ್ಲಿ ಎವರ್ ಸ್ಟೋನ್ ತಂಡ ಉತ್ತಮ ಆಟ ಪ್ರದರ್ಶಿಸಿ ೧ ಗೋಲುಗಳಿಂದ ಹಿನ್ನಡೆ ಪಡೆದುಕೊಂಡಿತ್ತು. ಉತ್ತರಾರ್ಧದಲ್ಲಿ ಗೋಲು ದಾಖಲಿಸಲಾಗದೆ ಸೋಲೊಪ್ಪಿಕೊಂಡಿತು.

೨ನೇ ಸೆಮಿಫೈನಲ್ ಪಂದ್ಯದಲ್ಲಿ ಕೋರಲ್ ವಾಟರ್ಸ್ ತಂಡವು ಆಲ್ಕೆಮಿ ಕಾಫಿ ವಿರುದ್ದ ೨-೦ ಗೋಲುಗಳಿಂದ ಜಯಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು. ಕೋರಲ್ ಪರ ೯ ನೇ ನಿಮಿಷದಲ್ಲಿ ನಿಶಾ, ೨೬ ನೇ ನಿಮಿಷದಲ್ಲಿ ಲಿಕಿತಾ ತಲಾ ಒಂದೊAದು ಗೋಲು ಹೊಡೆದರು. ಅಲ್ಕೆಮಿ ತಂಡದ ಪ್ರಯತ್ನಗಳು ಗೋಲಾಗಿ ಪರಿವರ್ತನೆಯಾಗಲಿಲ್ಲ. ಕೋರಲ್‌ಗೆ ಸುಲಭ ಗೆಲುವು ಲಭಿಸಿತು. ತಾಂತ್ರಿಕ ವರ್ಗದಲ್ಲಿ ಪವನ್, ಗಣಪತಿ, ನಾಚಪ್ಪ, ದಿಲನ್, ಸುಪ್ರಿತಾ, ಕೌಶಿಕ್ ಕಾರ್ಯನಿರ್ವಹಿಸಿದರು.