*ಗೋಣಿಕೊಪ್ಪ, ಜ. ೨೩: ಮಕ್ಕಳಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಹಿರಿಯರ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಕಸ ವಿಂಗಡಿಸಲು ಪ್ಲಾಸ್ಟಿಕ್ ಬುಟ್ಟಿ ಮತ್ತು ಚೀಲಗಳ ವಿತರಣೆ ಮತ್ತು ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಮನೆ ಮತ್ತು ವಠಾರ ಸ್ವಚ್ಛವಾಗಿದ್ದರೆ ಮಾತ್ರ ಗ್ರಾಮ ಸ್ವಚ್ಛವಾಗಿರಲು ಸಾಧ್ಯ. ಪ್ರತಿಯೊಬ್ಬರು ತಮ್ಮ ಮನೆಯ ಮೂಲಕವೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ೧೫ನೇ ಹಣಕಾಸು ಯೋಜನೆಯಡಿ ೨೦ ಲಕ್ಷ ಮೊದಲ ಹಂತದ ಅನುದಾನ ಬಂದಿದೆ. ನೂತನವಾಗಿ ಆಯ್ಕೆಯಾದ ಸದಸ್ಯರು ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ರಸ್ತೆ, ಶೌಚಾಲಯ, ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಕರ್ಯ ಗಳಿಗೆ ಬಳಸಬೇಕು ಎಂದರು.

ಜಲಜೀವನ್ ಯೋಜನೆಯಡಿ ವೀರಾಜಪೇಟೆ ತಾಲೂಕಿಗೆ ೨೫ ಕೋಟಿ ಅನುದಾನ ಬರಲಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ೫೪ ಲಕ್ಷ ರೂಪಾಯಿಗಳ ಮೊತ್ತ ಸಿಗಲಿದೆ. ಈ ಅನುದಾನದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳಿಗೂ ಕುಡಿಯುವ ನೀರಿನ ಸರಬರಾಜು ಮತ್ತು ಪೈಪ್‌ಲೈನ್, ಮೂರು ನಲ್ಲಿಗಳನ್ನು ಅಳವಡಿಸುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ ಅವರು, ಗ್ರಾಮದ ಸ್ವಚ್ಛತೆಗೆ ಪಂಚಾಯಿತಿ ಜತೆಗೆ ಗ್ರಾಮಸ್ಥರು ಕೈಜೋಡಿಸಬೇಕು ಎಂದರು.

ಗ್ರಾಮದ ಪ್ರಮುಖ ಲಾಲಾ ಭೀಮಯ್ಯ ಮಾತನಾಡಿ, ಶಾಸಕರು ವಿಶೇಷ ಆಸಕ್ತಿಯಿಂದ ಕಳೆದ ಬಾರಿ ಬಿ. ಶೆಟ್ಟಿಗೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ರೂ. ೧.೩೦ ಕೋಟಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.

ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮದ್ರೀರ ಗಿರೀಶ್, ಜಗದೀಶ್, ನೇತ್ರಾವತಿ, ಕಾವೇರಮ್ಮ, ಲಕ್ಷ್ಮಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಹಸಿರುದಳ ಸಂಸ್ಥೆ ಯೋಜನಾ ಅಧಿಕಾರಿ ಮಂಗಲ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.