ಸೋಮವಾರಪೇಟೆ, ಜ. ೨೩: ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಎದುರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಯಿತು.
ಬಿಜೆಪಿ ನೇತೃತ್ವದ ಎರಡೂ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತಿವೆ. ಇಂತಹ ಕಾಯ್ದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಪಿಎಂಸಿ ಕಾಯಿದೆ, ವಿದ್ಯುತ್ ಖಾಸಗೀಕರಣ, ದಿನ ಬಳಕೆ ವಸ್ತುಗಳ ಬೆಲ ಏರಿಕೆ, ಗೋ ಹತ್ಯೆ ನಿಷೇಧ, ಕಾರ್ಮಿಕರ ಹಕ್ಕು ಅಮಾನತು ಸೇರಿದಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದು ದೀನ ದಲಿತರ ವಿರುದ್ಧ ಧಮನಕಾರಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಕಳೆದ ಎರಡು ತಿಂಗಳಿನಿAದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ೧೬೦ಕ್ಕೂ ಹೆಚ್ಚಿನ ರೈತರು ಮೃತರಾಗಿದ್ದಾರೆ. ಆದರೂ ರೈತ ವಿರೋಧಿ ಕಾನೂನನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯುತ್ತಿಲ್ಲ ಎಂದು ದೂರಿದರು.
ತಾ. ೨೬ರಂದು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ಬೆಂಬಲಿಸಿ ಜನಾಂದೋಲನ ವೇದಿಕೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಮನವಿ ಪತ್ರವನ್ನು ತಾಲೂಕು ಕಚೇರಿಯ ಕಂದಾಯ ಇಲಾಖೆಯ ಮೋಹನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭ ವೇದಿಕೆಯ ಜಿಲ್ಲಾಧ್ಯಕ್ಷ ನಿರ್ವಾಣಪ್ಪ, ಗೌರವಾಧ್ಯಕ್ಷ ಜಯಪ್ಪ ಹಾನಗಲ್, ಉಪಾಧ್ಯಕ್ಷ ಹೊನ್ನಪ್ಪ, ಖಜಾಂಚಿ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ಮಂಜುನಾಥ್, ತಲ್ತಾರೆ ರಾಜಪ್ಪ, ಅಜಯ್, ಚೆನ್ನ, ದಾಮೋದರ್, ಆನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.