ಮಡಿಕೇರಿ, ಜ. ೨೩: ನಗರದ ವೆಸ್ಟನ್ ಹಾಗೂ ಬ್ಯಾರಿ ವಾರಿರ‍್ಸ್ ವತಿಯಿಂದ ೩ನೇ ವರ್ಷದ ಮಡಿಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ನಗರದ ಅಲ್-ವೆಸಲ್ ಹೊಟೇಲ್ ಸಭಾಂಗಣದಲ್ಲಿ ಇಂದು ನಡೆಯಲಿದೆ ಎಂದು ಸಂಘಟನೆಯ ಸದಸ್ಯ ಹ್ಯಾರೀಸ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಕ್ರೀಡಾಪಟುಗಳನ್ನು ಗುರುತಿಸುವ ಹಾಗೂ ಯುವಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮೂರನೇ ವರ್ಷದ ಎಂಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಂದ್ಯಾವಳಿಯಲ್ಲಿ ೧೦ ತಂಡಗಳು ಪಾಲ್ಗೊಳ್ಳಲಿದ್ದು, ಬೆಳಿಗ್ಗೆ ೧೧ ಗಂಟೆಗೆ ಐಕಾನ್ ಅಟಗಾರರು ಹಾಗೂ ಸಂಜೆ ೫ ಗಂಟೆಗೆ ಉಳಿದ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಫೆ. ೬ ರಿಂದ ೯ ರವರೆಗೆ ಪಂದ್ಯಾವಳಿ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೬೦,೦೦೦, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೪೦,೦೦೦ ನಗದು ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವೆಸ್ಟನ್ ಹಾಗೂ ಬ್ಯಾರಿ ವಾರಿರ‍್ಸ್ ಅಧ್ಯಕ್ಷ ರಶೀದ್, ಸ್ಥಾಪಾಕಾಧ್ಯಕ್ಷ ಕಬೀರ್, ಕಾರ್ಯದರ್ಶಿ ಸಮ್ನಾನ್ ಷರೀಪ್, ಸದಸ್ಯ ರುಬೈದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.