ಕುಶಾಲನಗರ, ಜ. ೨೧: ಕೊಡಗು ಜಿಲ್ಲೆಯಲ್ಲಿ ಹರಿಯುವ ಕಾವೇರಿ ಮತ್ತು ಹಾರಂಗಿ ನದಿ ನಿರ್ವಹಣೆಗೆ ಯೋಜನೆಗಳು ರೂಪುಗೊಳ್ಳುವುದರೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕೋಟಿಗಟ್ಟಲೆ ಅನುದಾನ ಹರಿದು ಬರುವ ಆಶಾಭಾವನೆ ವ್ಯಕ್ತಗೊಂಡಿದೆ. ಕಳೆದ ಸಾಲಿನಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯ ೪ ಕಡೆ ನದಿ ನಿರ್ವಹಣಾ ಕಾಮಗಾರಿ ಪ್ರಾರಂಭಗೊAಡು ಯಶಸ್ವಿಯಾದ ಬೆನ್ನಲ್ಲೇ ಇದೀಗ ಭಾಗಮಂಡಲದಿAದ ಕುಶಾಲನಗರ ತನಕ ನದಿ ನಿರ್ವಹಣೆಯ ಕಾಮಗಾರಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು ಕೆಲವು ಕ್ರಿಯಾಯೋಜನೆಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಇದರೊಂದಿಗೆ ಭಾಗಮಂಡಲದಿAದ ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ ತನಕ ಕಾವೇರಿ ನದಿಯ ಮೂಲಸ್ವರೂಪ ಮತ್ತು ನದಿ ತಟಗಳ ಪರಿಶೀಲನೆಗಾಗಿ ಕಾವೇರಿ ನೀರಾವರಿ ನಿಗಮ ಮೂಲಕ ನದಿ ಸರ್ವೆಗೆ ಟೆಂಡರ್ ಕರೆಯಲಾಗಿದೆ. ಈ ನಿಟ್ಟಿನಲ್ಲಿ ರೂ. ೬೮ ಲಕ್ಷ ಸರಕಾರದಿಂದ ಅನುದಾನ ಬಿಡುಗಡೆಗೊಂಡಿದೆ.
ಕಾವೇರಿ ನದಿಯ ಉಗಮ ಸ್ಥಾನದಿಂದ ಕೊಡಗು ಜಿಲ್ಲೆಯ ಗಡಿಭಾಗ ಶಿರಂಗಾಲ ತನಕ ನದಿಯಲ್ಲಿ ಬೆಳೆದಿರುವ ಗಿಡಗಂಟೆ, ಹೂಳು ತೆಗೆಯುವ ಯೋಜನೆಗೆ ಸರ್ವೇಕ್ಷಣೆ ನಡೆಸಲು ಕಾವೇರಿ ನೀರಾವರಿ ನಿಗಮ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಬಗ್ಗೆ ೨೦೨೦ ಸೆಪ್ಟೆಂಬರ್ನಲ್ಲಿ ಮಡಿಕೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನದಿಗೆ ಅಡ್ಡಲಾಗಿ ಶೇಖರಣೆಯಾಗಿರುವ ಹೂಳು, ಮಣ್ಣನ್ನು ತೆರವುಗೊಳಿಸಲು ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ ಪ್ರಸ್ತಾಪಿಸಿರುವುದನ್ನು ಗಮನಿಸಬಹುದು.
ಕುಶಾಲನಗರದ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆ ಸ್ಥಳೀಯ ನಾಗರಿಕರು ಪ್ರವಾಹ ಸಂತ್ರಸ್ತರ ವೇದಿಕೆ ರಚಿಸಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಡಳಿತದ ಮೊರೆ ಹೋಗಿದ್ದರು. ಕೊರೊನಾ ನಡುವೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮುತುವರ್ಜಿಯಿಂದ ಕಾವೇರಿ ಸೇತುವೆ ಬಳಿ, ಯೋಗಾನಂದ ಬಡಾವಣೆ, ಕುವೆಂಪು ಬಡಾವಣೆ, ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ನಿರ್ವಹಣೆ ನಡೆಸಲು ಸರಕಾರದಿಂದ ರೂ. ೮೭ ಲಕ್ಷ ಅನುದಾನ ಒದಗಿಸಲಾಗಿತ್ತು. ನಂತರ ಕಾಮಗಾರಿ ಕೂಡ ನಡೆದು ೨೦೨೦ ರಲ್ಲಿ ಈ ಭಾಗದ ಬಡಾವಣೆಗಳು ಹೆಚ್ಚಿನ ಪ್ರಮಾಣದ ಪ್ರವಾಹ ಸಮಸ್ಯೆಯಿಂದ ಹೊರಬರುವಂತಾಗಿತ್ತು. ವೀರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಜಿ. ಬೋಪಯ್ಯ ಭಾಗಮಂಡಲದಿAದ ಕುಶಾಲನಗರ ತನಕ ೮ ಕಡೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಒಟ್ಟು ೭.೫೦ ಕೋಟಿ ರೂ.ಗಳ ಅನುಮೋದನೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಾವೇರಿ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿದ್ದು ಈ ಮೂಲಕ ಜನಜೀವನ ಅಸ್ತವ್ಯಸ್ತಗೊಳ್ಳುವುದನ್ನು ಶಾಶ್ವತವಾಗಿ ತಪ್ಪಿಸಲು ಅಯ್ಯಂಗೇರಿ ಮತ್ತು ಕೊಟ್ಟಮುಡಿ ಗ್ರಾಮದಲ್ಲಿ ರೂ. ೯೮ ಲಕ್ಷ, ಬಲಮುರಿ ವ್ಯಾಪ್ತಿಯಲ್ಲಿ ರೂ. ೯೬ ಲಕ್ಷ, ಮೈತಾಡಿ ಗ್ರಾಮ ವ್ಯಾಪ್ತಿಯಲ್ಲಿ ರೂ. ೯೮ ಲಕ್ಷ, ಹಚ್ಚಿನಾಡು ಗ್ರಾಮ ವ್ಯಾಪ್ತಿಯಲ್ಲಿ ೯೮ ಲಕ್ಷ, ಸಿದ್ದಾಪುರ ವ್ಯಾಪ್ತಿಯಲ್ಲಿ ೧ ಕೋಟಿ ರೂಗಳ ಕಾಮಗಾರಿ, ಬಾಳುಗೋಡು ಗ್ರಾಮದಲ್ಲಿ ೧ ಕೋಟಿ, ನಿಸರ್ಗಧಾಮ ಬಳಿ ೧.೬೫ ಕೋಟಿ ರೂ.ಗಳ ಕಾಮಗಾರಿ ಸೇರಿದಂತೆ ಒಟ್ಟು ರೂ. ೭.೫ ಕೋಟಿ ವೆಚ್ಚದ ಕಾಮಗಾರಿಗೆ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಗೆ ಸಲ್ಲಿಸಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೆ ಅರಮೇರಿ ಬಳಿ ತಡೆಗೋಡೆ ನಿರ್ಮಿಸಲು ರೂ. ೧೦ ಕೋಟಿ ಮತ್ತು ಹಾರಂಗಿ ಜಲಾಶಯ ನಿರ್ವಹಣೆ ಮತ್ತು ಹೂಳೆತ್ತುವ ಕಾಮಗಾರಿಗೆ ರೂ. ೧೩೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸದ್ಯದಲ್ಲಿಯೇ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ನದಿ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗೆ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ ರೂ. ೯೮ ಲಕ್ಷದ ಕಾಮಗಾರಿ ಕಳೆದ ವರ್ಷ ನಡೆದಿತ್ತು. ಇದರೊಂದಿಗೆ ಹಾರಂಗಿ ನದಿಯಿಂದ ನೀರು ಬಿಟ್ಟ ಸಂದರ್ಭ ಕೂಡಿಗೆ ಸೈನಿಕ ಶಾಲೆ ಮತ್ತು ಮೊರಾರ್ಜಿ ಶಾಲೆ ಆವರಣ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಅಂದಾಜು ೫೦ ಕೋಟಿ ರೂ.ಗಳ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಕ್ರಿಯೆ ನಡೆಯುತ್ತಿದೆ. ಕಾವೇರಿ ನದಿಯಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಸೇರಿದಂತೆ ಕೂಡಿಗೆ, ಕಣಿವೆ ತನಕ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಅಂದಾಜು ರೂ. ೧೦೦ ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ನದಿ ತಟಗಳ ಪರಿಶೀಲನೆ ಕಾರ್ಯ ಕಳೆದ ೨೦೨೦ ರಲ್ಲಿ ನಡೆಸಲಾಗಿದೆ. ಈ ನಡುವೆ ನಮಾಮಿ ಗಂಗಾ ಯೋಜನೆಯಂತೆ ನಮಾಮಿ ಕಾವೇರಿ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ನೀಡಿದ್ದು ಕಾವೇರಿ ನದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೆ ಕಾರಣ ಪತ್ತೆಹಚ್ಚಲು ತಜ್ಞರ ಸಮಿತಿ ರಚಿಸಿ ಆ ಮೂಲಕ ನದಿಯ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶಾಶ್ವತ ಯೋಜನೆ ರೂಪಿಸಲು ಕೋರಿದೆ.
- ಚಂದ್ರಮೋಹನ್