ಸಿದ್ದಾಪುರ, ಜ. ೨೨: ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ ನಮ್ಮ ಹೊಣೆ ಎಂಬ ಶೀರ್ಷಿಕೆಯಡಿಯಲ್ಲಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಸ್ಥಳೀಯ ಮೀನುಕೊಲ್ಲಿ ಉಪವಿಭಾಗದ ಅರಣ್ಯಾಧಿಕಾರಿಗಳಾದ ಸುಬ್ರಾಯ ಆಗಮಿಸಿ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ ಮಾಡುವ ಉದ್ದೇಶ ತಿಳಿಸಿದರು. ಭಾರತದಲ್ಲಿ ಹಂಚಿಕೆಯಾಗಿರುವ ಅರಣ್ಯದ ಪ್ರಮಾಣ ಅರಣ್ಯವನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಅರಣ್ಯ ಸಂರಕ್ಷಣೆ ಮಾಡುವ ವಿಧಾನ ಇವುಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು. ಅಲ್ಲದೆ ವಿವಿಧ ಘೋಷಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ಹಾಗೆ ಪ್ರತೀ ವಿದ್ಯಾರ್ಥಿಯೂ ಒಂದೊAದು ಗಿಡನೆಟ್ಟು ಘೋಷಣೆ ಮಾಡಿದರೆ ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಅವರಿಗೆ ಬಹುಮಾನ ನೀಡುವ ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಬಿ. ಮೂರ್ತಿ, ಸಹ ಶಿಕ್ಷಕರಾದ ನಾಗರಾಜ್, ಅರುಣ್ ಕುಮಾರ್, ಕುಸುಮ, ಪ್ರಸಾದ್, ಶ್ವೇತ, ರೀತಾ, ಉಷಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಸರ್ವರನ್ನು ಸ್ವಾಗತಿಸಿದರು. ಅರುಣ್ ಕುಮಾರ್ ಸಮಾಜ ವಿಜ್ಞಾನ ಶಿಕ್ಷಕರು ಸರ್ವರನ್ನು ವಂದಿಸಿದರು.