ಕೂಡಿಗೆ, ಜ. ೨೨: ಗಾಂಜಾ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವತ್ತೂರು ಕೂಡುಮಂಗಳೂರು ಗ್ರಾಮದ ಕೂಲಿ ಕಾರ್ಮಿಕ ಚೇತನ್ ಎಂ (೨೦) ಬಂಧಿತ ಆರೋಪಿ. ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಅಧಿಕವಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆ ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ಸುಂದರನಗರ ಗ್ರಾಮದ ಜಂಕ್ಷನ್‌ನ ಬಸ್ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಮಾಲು ಸಹಿತ ಬಂಧಿಸಿದ್ದಾರೆ. ಆರೋಪಿತನಿಂದ ೧ ಕೆಜಿ ೨೯೦ ಗ್ರಾಂ ತೂಕದ ಗಾಂಜಾ ಸೊಪ್ಪು, ದ್ವಿಚಕ್ರ ವಾಹನ, ಮೊಬೈಲ್ ಹಾಗೂ ಗಾಂಜಾ ಸೊಪ್ಪು ಮಾರಾಟದಿಂದ ಬಂದಿದ್ದ ೭೦೦ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್ಪಿ ಹೆಚ್.ಎಂ ಶೈಲೇಂದ್ರ ಮಾರ್ಗದರ್ಶನ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಪಿಎಸ್‌ಐ ಶಿವಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರೋಬೇಷನರಿ ಪಿಎಸ್‌ಐ ಸ್ವಾಮಿ, ಸಿಬ್ಬಂದಿಗಳಾದ ಪ್ರಸನ್ನ, ದಯಾನಂದ, ಹೆಚ್.ಸಜಿ, ಮಂಜುನಾಥ್, ವಿವೇಕ್, ಶಾಫಿನ್ ಅಹಮ್ಮದ್ ಇದ್ದರು.