ಮಡಿಕೇರಿ, ಜ. ೨೦: ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಯಾವುದೇ ನಿರಾಧಾರ ಆರೋಪಗಳನ್ನು ಮಾಡಿಲ್ಲ, ಬದಲಿಗೆ ಪಿಗ್ಮಿ ಸಂಗ್ರಹಗಾರರಿಗೆ ಎದುರಾಗಿರುವ ಅಡ್ಡಿ, ಆತಂಕಗಳನ್ನು ಬೆಳಕಿಗೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಒಂದೂವರೆ ವರ್ಷದಿಂದ ಡಿಸಿಸಿ ಬ್ಯಾಂಕಿನ ಎಲ್ಲಾ ಪಿಗ್ಮಿ ಸಂಗ್ರಹಗಾರರಿಗೆ ತೊಂದರೆಯಾಗಿದ್ದು, ಪಿಗ್ಮಿ ಕಮಿಷನ್ ಹಣದ ಶೇ. ೫೦ ರಷ್ಟನ್ನು ಕಡಿತಗೊಳಿಸಿ, ಅಮಾನತು ಖಾತೆಗೆ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೇ. ೩ ರಷ್ಟು ಇದ್ದ ಕಮಿಷನ್‌ನ್ನು ಏಕಾಏಕಿ ಶೇ.೨ಕ್ಕೆ ಇಳಿಸಲಾಗಿದ್ದು, ಇದರಿಂದಲೂ ಶೇ. ೫೦ ರಷ್ಟು ಕಡಿತಗೊಳಿಸಿರುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಪರಿಸ್ಥಿತಿಯಿಂದ ಚೇತರಿಕೆ ಕಾಣುವ ಸಂದರ್ಭದಲ್ಲೇ ಬ್ಯಾಂಕ್ ನಮ್ಮನ್ನು ಅತಂತ್ರಗೊಳಿಸಿದ್ದು, ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.