ಸೋಮವಾರಪೇಟೆ, ಜ. ೧೯: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಸೋಮವಾರ ಪೇಟೆಯಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ ಎಂದು ಆರೋಪಿಸಿರುವ ಕರ್ನಾಟಕ ಭೂ ಹಕ್ಕುದಾರರ ವೇದಿಕೆ, ತಕ್ಷಣ ತಾಲೂಕು ಅಕ್ರಮ-ಸಕ್ರಮ ಸಮಿತಿ ಸಭೆ ಕರೆದು, ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವೇದಿಕೆಯ ರಾಜ್ಯ ಸಂಯೋಜಕ ಸುನಂದ್‌ಕುಮಾರ್, ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದಿರುವುದರಿಂದ ಬಹುತೇಕ ಬಡವರು ಸರ್ಕಾರದ ಸೌಲಭ್ಯ ಮತ್ತು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಅಕ್ರಮ- ಸಕ್ರಮ ಸಮಿತಿಗೆ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿದ್ದು, ತಹಶೀಲ್ದಾರ್ ಅವರು ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿದ್ದಾರೆ. ಆದರೂ ಒಂದು ವರ್ಷದಿಂದ ಸಭೆ ನಡೆಸಿಲ್ಲ. ವೀರಾಜಪೇಟೆ, ಮಡಿಕೇರಿಯಲ್ಲಿ ಸಭೆ ನಡೆದು ಹೆಚ್ಚಿನ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಸೋಮವಾರಪೇಟೆಯಲ್ಲಿ ನಿರ್ಲಕ್ಷö್ಯ ವಹಿಸಲಾಗಿದೆ ಎಂದು ಸುನಂದ್‌ಕುಮಾರ್ ದೂರಿದರು.
ಫಾರಂ ನಂ. ೫೭ ರಲ್ಲಿ ಸಲ್ಲಿಸಿದ ಯಾವುದೇ ಅರ್ಜಿಗಳಿಗೆ ಈವರೆಗೆ ಹಕ್ಕುಪತ್ರ ವಿತರಿಸಿಲ್ಲ. ಫಾರಂ ನಂ. ೫೦, ೫೩ರಲ್ಲಿ ಒಟ್ಟು ೮೪೬೬ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಬಡವರಿಗೆ ಆಸ್ತಿ ದಾಖಲಾತಿ ಇಲ್ಲದ ಹಿನ್ನೆಲೆ ಸಾಲಮನ್ನಾ ದಂತಹ ಸೌಲಭ್ಯದಿಂದ ವಂಚಿತ ರಾಗಬೇಕಾಗಿದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಾಗ್ಗೆ ಕಾನೂನುಗಳು ಬದಲಾಯಿಸುತ್ತಿರುವದರಿಂದ ದಾಖಲಾತಿಗಳಿಲ್ಲದೇ ರೈತರು ಹಾಗೂ ಬಡವರು ಆಸ್ತಿ ಹಕ್ಕುಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ನಿಯಮಿತವಾಗಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಅರ್ಹ ಅರ್ಜಿಗಳಿಗೆ ಕೂಡಲೇ ಮಂಜೂರಾತಿ ನೀಡಬೇಕು ಎಂದರು. ಈಗಾಗಲೇ ಹಂಗಾಮಿ ಸಾಗುವಳಿ ಚೀಟಿ ನೀಡಿರುವವರಿಗೆ ಆರ್.ಟಿ.ಸಿ. ಒದಗಿಸಬೇಕು. ತಾಲೂಕಿನ ಊರೂಡುವೆ ಮತ್ತು ಊರುಗುಪ್ಪೆ ಭೂ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಅರ್ಜಿದಾರರಿಗೆ ಒಂದೇ ಬಾರಿ ಸಕ್ರಮಗೊಳಿಸಿ ದಾಖಲಾತಿ ನೀಡಬೇಕು. ತಾಲೂಕು ಕಚೇರಿಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಸಿನಿಯಾರಿಟಿ ಪ್ರಕಾರ ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಒತ್ತಾಯಿಸಿದರು.
ಬಗರ್ ಹುಕುಂ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಾಕಿ ಉಳಿದಿರುವ ಸರ್ವೆ ಕಾರ್ಯಗಳನ್ನು ಕೂಡಲೇ ಕೈಗೊಂಡು ಭೂಮಿ ಹಕ್ಕುಪತ್ರ ನೀಡಲು ಶಾಸಕರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೊಡ್ಡಮಳ್ತೆ, ಸಿಡಿಗಳಲೆ ವ್ಯಾಪ್ತಿಯಲ್ಲಿ ಸ್ಮಶಾನದ ಸಮಸ್ಯೆಯಿದ್ದು, ತಾಲೂಕು ತಹಶೀಲ್ದಾರ್ ಈ ಬಗ್ಗೆ ಗಮನಹರಿಸಿ ಸೂಕ್ತ ಸ್ಥಳವನ್ನು ಸ್ಮಶಾನಕ್ಕೆ ಮೀಸಲಿರಿಸಬೇಕೆಂದು ಗೋಷ್ಠಿಯಲ್ಲಿದ್ದ ವೇದಿಕೆಯ ಪದಾಧಿಕಾರಿಗಳಾದ ರಾಜಪ್ಪ, ಕಿರಣ್‌ಕುಮಾರ್, ಸತೀಶ್ ಕುಮಾರ್ ಒತ್ತಾಯಿಸಿದರು.