ವರದಿ : ಕೆ.ಎಸ್. ಮೂರ್ತಿ

ಕಣಿವೆ, ಜ. ೧೯ : ಕಣಿವೆ ಗ್ರಾಮದಲ್ಲಿ ಮಂಗಳವಾರ ದಿನವಿಡೀ ಅರಣ್ಯ ಸಿಬ್ಬಂದಿಗಳು ಗಾಳಿಯಲ್ಲಿ ಹಾರಿಸಿದ ಗುಂಡಿನ ಸದ್ದು, ಇನ್ನೊಂದೆಡೆ ಜನರ ದಂಡು, ಕೇಕೆ, ಅಬ್ಬರ, ಮತ್ತೊಂದೆಡೆ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸ್ಥಗಿತಗೊಂಡ ವಾಹನಗಳು.

ಕಾಡಾನೆಗಳ ಹಿಂಡೊAದು ನಾಡಿಗೆ ಬಂದು ತಮ್ಮ ಜೊತೆಯಿದ್ದ ಮರಿಯಾನೆಯ ಸುರಕ್ಷತೆಯ ನಿಟ್ಟಿನಲ್ಲಿ ನದಿ ದಂಡೆ ಹಾಗೂ ಪೊದೆಗಳನ್ನು ಬಿಟ್ಟು ಕದಲಲೇ ಇಲ್ಲ. ಆದರೂ ಕೃಷಿಕರು ಹಾಗೂ ಗ್ರಾಮನಿವಾಸಿಗಳ ಹಿತದೃಷ್ಟಿಯಿಂದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ದಿನವಿಡೀ ನೂರಾರು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ, ಸಾವಿರಾರು ರೂಗಳ ಪಟಾಕಿ ಸಿಡಿಸಿ ನಡೆಸಿದ ಕಸರತ್ತು ಸಂಜೆ ಫಲಿಸಿತು.

ಕಾಡಾನೆಗಳಿಗೆ ಹಿಂಸೆ ಆಗುತ್ತೆ ಅವು ಸಮಾಧಾನದಿಂದ ಕಾಡಿಗೆ ತೆರಳಲಿ, ಜನ ಯಾರೂ ಕೂಡ ಗುಂಪು ಗೂಡಬೇಡಿ. ಕೇಕೆ ಹಾಕಬೇಡಿ. ಅವು ಸಮಾಧಾನದಿಂದ ಕಾಡಿಗೆ ತೆರಳಲಿ, ಜನ ಯಾರೂ ಕೂಡ ಗುಂಪು ಗೂಡಬೇಡಿ. ಕೇಕೆ ಹಾಕಬೇಡಿ.ಅವು ಸಮಾಧಾನದಿಂದ ಕಾಡಿಗೆ ತೆರಳಲಿ, ಜನ ಯಾರೂ ಕೂಡ ಗುಂಪು ಗೂಡಬೇಡಿ. ಕೇಕೆ ಹಾಕಬೇಡಿ. ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಆನೆಗಳನ್ನು ಸಂಜೆ ೬.೩೦ ಸಮಯದಲ್ಲಿ ಚಿನ್ನೇನಹಳ್ಳಿ ಅರಣ್ಯಕ್ಕೆ ಹೆದ್ದಾರಿ ಹಾಗೂ ಹಾರಂಗಿ ಮುಖ್ಯ ಕಾಲುವೆಯನ್ನು ದಾಟಿ ಓಡಿಸುವಲ್ಲಿ ಸಫಲರಾದರು.

(ಮೊದಲ ಪುಟದಿಂದ)

ಘಟನೆ ವಿವರ : ಕಾಡಿನೊಳಗೆ ಕಾಡಾನೆಗಳಿಗೆ ಬೇಕಾದಂತಹ ಆಹಾರವಿಲ್ಲದ ಪರಿಣಾಮ ಹಸಿವು ತಾಳಲಾರದೇ ಹೊತ್ತು ಮುಳುಗಿದೊಡನೆ ಕಣಿವೆಯತ್ತ ಆಗಮಿಸಿದ ಕಾಡಾನೆಯ ಹಿಂಡೊAದು ಮರಳಿ ಕಾಡಿಗೆ ತೆರಳಲು ಭಾರೀ ಪ್ರಯಾಸ ಪಟ್ಟ ಘಟನೆ ನಡೆಯಿತು.

ಕಳೆದ ರಾತ್ರಿ ಮೂರು ಹೆಣ್ಣಾನೆಗಳು ಒಂದು ಮರಿಯಾನೆ ಜೊತೆ ಆಹಾರ ಅರಸಲು ಬಂದು ಕಣಿವೆ ಬಳಿಯ ಹಕ್ಕೆ ಗ್ರಾಮದ ಅಬ್ದುಲ್ಲಾ ಎಂಬವರ ಒಂದು ಎಕರೆ ಬಾಳೆ ತೋಟವನ್ನು ಧ್ವಂಸ ಮಾಡಿ ೨೦ ಸಾವಿರ ಮೌಲ್ಯದ ನೀರಾವರಿ ಪೈಪ್‌ಗಳನ್ನು ನಾಶಮಾಡಿ ಹಾಗೋ ಹೇಗೋ ಹೊಟ್ಟೆ ತುಂಬಿಸಿಕೊAಡು ನೀರು ಕುಡಿಯಲೆಂದು ಕಾವೇರಿ ನದಿಗೆ ಬಂದಿದ್ದವು. ಬೆಳಕು ಹರಿದರೂ ನದಿಯೊಳಗಿದ್ದ ಕಾಡಾನೆಗಳು ಕಾಡಿಗೆ ಮರಳಲು ಆಗಮಿಸಿದಾಗ ಕುಶಾಲನಗರ ಹಾಸನ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಶಬ್ಧಕ್ಕೆ ಅಂಜಿ ಕಣಿವೆಯ ಭಾರದ್ವಾಜ್ ಅವರ ತೋಟದಲ್ಲಿ ಸೇರಿಕೊಂಡಿದ್ದವು.

ವಿಷಯ ತಿಳಿದ ಸೋಮವಾರಪೇಟೆ ವಲಯದ ಅರಣ್ಯಾಧಿಕಾರಿಗಳು ಸಶಸ್ತ್ರ ಧಾರಿಗಳಾಗಿ ಕಣಿವೆ ಗ್ರಾಮಕ್ಕೆ ಬಂದು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದರು. ಕಾಡಾನೆಗಳ ಹಿಂಡು ಗ್ರಾಮದಲ್ಲಿ ಬೀಡು ಬಿಟ್ಟ ಸುದ್ದಿ ಕೇಳಿ ಗ್ರಾಮ ನಿವಾಸಿಗಳು ತಂಡೋಪತAಡವಾಗಿ ಧಾವಿಸಿ ಬಂದು ಕಾಡಾನೆಗಳ ಕಂಡು ಬೊಬ್ಬೆ ಹೊಡೆಯುತ್ತಿದ್ದಂತೆಯೇ ಕಾಡಾನೆಗಳು ಮತ್ತೆ ಹೆದರಿ ಕಾವೇರಿ ನದಿಯೊಳಗೆ ಈಜಿ ಅಲ್ಲಿನ ಪೊದೆಗಳ ಬಳಿ ಅವಿತು ನಿಂತವು.

ಆದರೂ ಬೆಂಬಿಡದ ಜನ ಅಲ್ಲಿಗೂ ಧಾವಿಸಿ ಕಿರುಚಲು ಆರಂಭಿಸಿದರು. ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ವಂದಿಗಳು ಜೀವದ ಹಂಗು ಲೆಕ್ಕಿಸದೇ ಕಾಡಾನೆಗಳನ್ನು ನದಿಯೊಳಗಿಂದ ಮೇಲಕ್ಕೆ ದಾಟಿಸುವ ಪ್ರಯತ್ನ ಮಾಡಿದರಾದರೂ ಹೆದ್ದಾರಿಯಲ್ಲಿದ್ದ ವಾಹನ ಹಾಗೂ ಜನರನ್ನು ಕಂಡು ಆನೆಗಳು ಮತ್ತೆ ನದಿಯೊಳಕ್ಕೆ ತೆರಳಿದವು.

ಅರಣ್ಯ ಸಿಬ್ಬಂದಿಗಳು ಹರಸಾಹಸ ಮಾಡಿ ಕಾರ್ಯಾಚರಣೆ ನಡೆಸಿದರೂ ಅತ್ತ ಹೆದ್ದಾರಿಯಲ್ಲಿ ಕಾಡಾನೆ ಹಿಂಡು ನೋಡಲು ಗುಂಪು ಸೇರಿ ಕಿರುಚುತ್ತಿದ್ದಜನರನ್ನು ಕಂಡು ಕಾಡಾನೆಗಳು ಮತ್ತೆ ನದಿ ದಂಡೆಯತ್ತ ಮರಳುತ್ತಿದ್ದವು. ಹೀಗೆ ಕಾಡಾನೆಗಳು ಸಂಚರಿಸುವ ಮಾರ್ಗ ಮಧ್ಯೆ ಹುಲುಸೆ ಗ್ರಾಮದ ಶಿವನಂಜಪ್ಪ ಅವರು ಬೆಳೆದಿದ್ದ ಮುಸುಕಿನ ಜೋಳದ ಫಸಲು, ನಾಗಪ್ಪ ಎಂಬವರು ಬೆಳೆದಿದ್ದ ಮರಗೆಣಸು ಫಸಲನ್ನು ತುಳಿದು ತಿಂದು ನಾಶ ಪಡಿಸಿದವು.

ತಮ್ಮ ಸಂಗಡ ಇದ್ದಂತಹ ಮರಿಯಾನೆಯನ್ನು ಸಂರಕ್ಷಿಸಿ ಜೋಪಾನವಾಗಿಸಲು ತಾಯಿ ಆನೆ ಸೇರಿದಂತೆ ಉಳಿದೆರಡು ಹೆಣ್ಣಾನೆಗಳು ಬಹಳಷ್ಟು ತ್ರಾಸ ಪಡುತ್ತಿದ್ದುದು ಕಂಡು ಬಂತು. ಜನರ ಆರ್ಭಟ ತಡೆಯದೇ ನದಿಯಾಚೆಯ ದಂಡೆಗೆ ತೆರಳಿದ್ದ ಕಾಡಾನೆಗಳು ಮತ್ತೆ ಬದಲೀ ಮಾರ್ಗವಾಗಿ ನದಿಯೊಳಗಿಂದ ಕಾಡಿನತ್ತ ತೆರಳುವ ಸಂದರ್ಭ ಗುಂಪಿನಲ್ಲಿದ್ದ ಒಂದು ಹೆಣ್ಣಾನೆ ನೀರಿನೊಳಗೆ ಮುಂದೆ ಸಾಗಿತು. ಅದರ ಹಿಂದೆ ಮರಿಯಾನೆ ಹಾಗೂ ಮರಿಯಾನೆಯ ಹಿಂದೆ ಉಳಿದೆರಡು ಆನೆಗಳು ಸಾಗುತ್ತಿದ್ದ ಚಿತ್ರಣ ನೋಡುಗರಿಗೆ ಮರುಕ ಹುಟ್ಟಿಸುತ್ತಿತ್ತು.

ಕಾಡಾನೆಗಳು ಬಂದವೆAದು ಬೊಬ್ಬೆ ಇಟ್ಟು ಜನ ತೊಂದರೆ ಕೊಡುತ್ತಿದ್ದುದನ್ನು ಕಂಡ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಸ್ತೆಯಲ್ಲಿದ್ದ ಜನರನ್ನು ಲಾಠಿ ಬೀಸಿ ಚದುರಿಸಿದರು. ಸಂಜೆ ೬.೩೦ ರ ವೇಳೆಗೆ ಕಾರ್ಯಾಚರಣೆ ಮುಕ್ತಾಯಗೊಂಡಿತು.

ಕಾರ್ಯಾಚರಣೆಯಲ್ಲಿ ನದಿಯಾಚೆಯ ಪಿರಿಯಾಪಟ್ಟಣ ಅರಣ್ಯಾಧಿಕಾರಿಗಳಾದ ರತನ್‌ಕುಮಾರ್, ಪೆಮ್ಮಯ್ಯ, ಮಧುಸೂದನ್, ಸಂದೀಪ್ ನಾಯ್ಕ, ಯಲಗುರೇಶ, ಸೋಮವಾರಪೇಟೆ ಅರಣ್ಯಾಧಿಕಾರಿ ಸುಮಂತ್, ಸಿಬ್ಬಂದಿಗಳಾದ ಸತೀಶ್‌ಕುಮಾರ್, ಭರತ್, ಪುನೀತ್, ಸತೀಶ್ ಮೊದಲಾದವರಿದ್ದರು.