*ಗೋಣಿಕೊಪ್ಪಲು, ಜ. ೧೮: ಕಳಪೆ ಸಮವಸ್ತç ಬೇಡ, ಗೌರವ ಧನಬೇಕು, ಅಧಿಕಾರಿಯ ದಬ್ಬಾಳಿಕೆ ನಿಲ್ಲಬೇಕು, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಮತ್ತು ಇತರ ಇಲಾಖೆಯ ಕೆಲಸ ಬೇಡ ಎಂದು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೌಕರರ ಸಂಘ ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ಸುಮಾರು ೮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷೆ ಕಾವೇರಮ್ಮ ಹಾಗೂ ತಾಲೂಕು ಅಧ್ಯಕೆÀ್ಷ ಸುಮಿತ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಿAದ ಬಸ್ ನಿಲ್ದಾಣದವರೆಗೆ ಮೆರವಣಿಗೆ ಹೊರಟು ನಂತರ ಕಚೇರಿಯ ಮುಂಭಾಗದಲ್ಲಿ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ನಿರತರಾದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವರ್ಷಕ್ಕೆ ೧೨ ತಿಂಗಳಿದ್ದರೂ ಕೇವಲ ೯ ತಿಂಗಳಷ್ಟೇ ಪೌಷ್ಟಿಕ ಆಹಾರ ಪೂರೈಕೆ ಆಗುತ್ತಿದೆ. ಇದರಿಂದ

(ಮೊದಲ ಪುಟದಿಂದ) ಮಕ್ಕಳು ಅಪೌಷ್ಟಿಕತೆಯಿಂದ ನರಳುವ ಸ್ಥಿತಿ ಉಂಟಾಗುತ್ತಿದೆ. ಅಲ್ಲದೇ ಗೌರವ ಧನ ಸಮರ್ಪಕವಾಗಿ ಸಿಗುತ್ತಿಲ್ಲ. ನಿವೃತ್ತಿ ನಂತರವು ಪಿಂಚಣಿ ಕೊಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಇಲಾಖೆಯಿಂದ ನೀಡುವ ಸಮವಸ್ತçವು ಕಳಪೆ ಗುಣಮಟ್ಟವನ್ನು ಹೊಂದಿದೆ. ಬಹಳಷ್ಟು ಕಾರ್ಯಕರ್ತೆಯರಿಗೆ ಸಮವಸ್ತçವೇ ವಿತರಣೆ ಆಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಗಳೊಂದಿಗೆ ಇತರ ಇಲಾಖೆಯ ಕಾರ್ಯಚಟುವಟಿಕೆಯಲ್ಲಿಯೂ ನಿಗದಿತ ಸಮಯವಿಲ್ಲದೇ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಆದರೂ ನಮ್ಮನ್ನು ಶೋಷಿತರನ್ನಾಗಿ ಮಾಡುತ್ತಿರುವುದು ವಿಪರ್ಯಾಸ ಎಂದು ಸುನಂದ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷೆ ಕಾವೇರಮ್ಮ ಪೋಷಣಾ ಅಭಿಯಾನ ಗೌರವ ಧನ ನೀಡುವುದರಲ್ಲಿ ಅವ್ಯವಹಾರ ನಡೆದಿದೆ. ಈ ವಿಚಾರವಾಗಿ ತನಿಖೆಯಾಗಬೇಕೆಂದು ಒತ್ತಾಯಿಸಿದರು. ನಿವೃತ್ತಿ ಹೊಂದಿದ ನೌಕರರು ಕಚೇರಿಗೆ ಹೋದಾಗ ಕನಿಷ್ಟ ಗೌರವ ನೀಡದೇ ಅಧಿಕಾರಿಗಳು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯ ನಡೆಯನ್ನು ಖಂಡಿಸಿದರು.

ತಾಲೂಕು ಅಧ್ಯಕ್ಷೆ ಸುಮಿತ್ರಾ ಕಾರ್ಯಕರ್ತರನ್ನು ಉದ್ದೇಶಿಸಿ ನಮ್ಮ ಹಕ್ಕಿಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ವೇತನಕ್ಕಾಗಿ ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಇತರ ಇಲಾಖೆಯ ಕೆಲಸ ಮಾಡಬಾರದು ಎಂದು ಸರ್ಕಾರದ ಆದೇಶವಿದ್ದರೂ ಸಹ ಇತರ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರನ್ನು ನಿರ್ದಾಕ್ಷಿಣ್ಯವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ಇಲಾಖೆಯ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೇ ಕಾರಣ. ನಮಗೆ ಸಹಕಾರ ನೀಡದೆ ನಮ್ಮನ್ನು ಎಲ್ಲಾ ಇಲಾಖೆಗಳಿಗೆ ಹರಾಜು ಹಾಕಿದ್ದಾರೆ. ಇದೀಗ ಇಲಾಖೆಯಿಂದ ಮೂಲ ಇಲಾಖೆಯ ಕೆಲಸ ಮಾಡಲು ಮೊಬೈಲ್ ಫೋನ್ ವಿತರಿಸಿದ್ದು, ಅದನ್ನು ಸಹ ಇತರ ಇಲಾಖೆಯ ಕೆಲಸ ಮಾಡಲು ಬಳಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ನಾವು ಕುಗ್ಗಿಹೋಗಿದ್ದೇವೆ ಎಂದು ದುಃಖದ ನುಡಿಗಳನ್ನಾಡಿದರು.

ಕೊಡಗು ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಒಗ್ಗಟ್ಟಿನಿಂದ ಮಾತ್ರ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯ. ಹೋರಾಟಕ್ಕೆ ಸಮಾನ ಮನಸ್ಥಿತಿಯನ್ನು ಹೊಂದಿರಬೇಕು. ಸಂಘಟನೆಯ ಪ್ರತಿನಿಧಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಎರಡು ವರ್ಷದಿಂದ ತಾಲೂಕು ಮಟ್ಟ, ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದವರೆಗೆ ಮನವಿಯನ್ನು ಕೊಟ್ಟರೂ ಇದುವರೆಗೂ ನ್ಯಾಯ ಸಿಕ್ಕಿರುವುದಿಲ್ಲ. ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದರೆ ಇದು ಆಡಳಿತಾತ್ಮಕದ ನ್ಯೂನತೆಯನ್ನು ಎತ್ತಿತೋರಿಸುತ್ತದೆ ಎಂದು ಅಧಿಕಾರಿಯ ವಿರುದ್ಧ ಘೋಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಅವರು ಬೇಡಿಕೆಗಳ ಈಡೇರಿಕೆಯ ಮನವಿಪತ್ರವನ್ನು ಸಂಬAಧಿಸಿದ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸೀತಾಲಕ್ಷಿ÷್ಮ ಇಲಾಖೆಯ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿದೆ. ಇಲಾಖೆಯಲ್ಲಿ ಹೆಚ್ಚಿನ ಸಿಬ್ಬಂದಿಗಳು ಇಲ್ಲದೇ ಇರುವುದರಿಂದ ಕೆಲವೊಂದು ಲೋಪಗಳು ನಡೆದಿರಬಹುದು. ಆದರೆ ಅದನ್ನೇ ದೊಡ್ಡದು ಮಾಡಿ ಪ್ರತಿಭಟಿಸುವುದು ಉತ್ತಮ ಬೆಳವಣಿಗೆಯಲ್ಲ. ತಿಂಗಳ ವೇತನ ನವೆಂಬರ್ ತಿಂಗಳವರೆಗೆ ಪಾವತಿಯಾಗಿದೆ. ಡಿಸೆಂಬರ್ ತಿಂಗಳ ವೇತನ ತಮ್ಮ ಖಾತೆಗೆ ಜಮಾ ಆಗಲಿದೆ. ಆಹಾರ ಪೂರೈಕೆಯು ಸದ್ಯದಲ್ಲೇ ನಡೆಯಲಿದೆ. ಸಮವಸ್ತçದ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಅನಿತಾಥೆರೆಸಾ, ಉಪಾಧ್ಯಕ್ಷ ಡ್ಯಾನಿ ನಾಣಯ್ಯ, ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಶಾಸಕರಿಗೆ ಮನವಿ

ಅಂಗನವಾಡಿ ಕಾರ್ಯಕರ್ತರ ಹಲವು ಬೇಡಿಕೆಗಳನ್ನು ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರು ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಾಸಕರ ಕಚೇರಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷೆ ಕಾವೇರಮ್ಮ, ತಾಲೂಕು ಅಧ್ಯಕ್ಷೆ ಸುಮಿತ್ರ ಅವರು ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ತಾಲೂಕು ಅಧಿಕಾರಿಯಿಂದ ಕಾರ್ಯಕರ್ತರು ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ. ಯಾವುದೇ ವ್ಯವಸ್ಥಿತ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಪೌಷ್ಟಿಕ ಆಹಾರ ವಿತರಣೆಯಲ್ಲಿಯೂ ಮತ್ತು ವೇತನ ನೀಡುವುದರಲ್ಲೂ ವಿಳಂಬ ದೋರಣೆ ನಡೆಯುತ್ತಿದೆ ಎಂದು ಅಧಿಕಾರಿ ಸೀತಾಲಕ್ಷಿ÷್ಮಯ ವಿರುದ್ಧ ಶಾಸಕರಿಗೆ ದೂರು ನೀಡಿದರು.

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಶಾಸಕರು ಮನವಿಯಲ್ಲಿ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಪರಮರ್ಶಿಸಲಾಗುವುದು. ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಹಾಜರಿದ್ದರು. -ಎನ್.ಎನ್.ದಿನೇಶ್