ಕಣಿವೆ, ಜ. ೧೬: ಹಲವು ಬಾರಿ ಮನವಿ ಮಾಡಿ ತಮ್ಮ ಬಡಾವಣೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿದ ನಿವಾಸಿಗಳು ರಾಜ ಕಾರಣಿಗಳ ಪೊಳ್ಳು ಆಶ್ವಾಸನೆಗಳಿಗೆ, ಜನಪ್ರತಿನಿಧಿಗಳ ಸುಳ್ಳು ಭರವಸೆಗಳಿಗೆ ಹಾಗೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಬೇಸತ್ತು ಕೊನೆಗೆ ಬಡಾವಣೆಯ ಪ್ರವೇಶ ದ್ವಾರದಲ್ಲಿ ಸಮಸ್ಯೆಗಳ ತೋರಣ ಮಾಡಿಸಿ ತೂಗು ಹಾಕಿರುವ ಪ್ರಸಂಗ ಮುಳ್ಳುಸೋಗೆಯ ಕುವೆಂಪು ಬಡಾವಣೆಯಲ್ಲಿ ಕಂಡುಬರುತ್ತಿದೆ.
ನಾಗಾಲೋಟದಲ್ಲಿ ಬೆಳೆಯುತ್ತಿರುವ ತಾಲೂಕು ಕೇಂದ್ರ ಕುಶಾಲನಗರದ ಕೂಗಳತೆ ದೂರದಲ್ಲಿರುವ ಹಾಸನ ಹೆದ್ದಾರಿಯ ಅಂಚಿನಲ್ಲಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಕುವೆಂಪು ಬಡಾವಣೆಯ ನಿವಾಸಿಗಳು ವ್ಯವಸ್ಥೆಗೆ ಬೇಸತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ‘ಶೇಮ್’ ಆಗಲೆಂದು ಈ ರೀತಿ ಬಡಾವಣೆಯ ಪ್ರವೇಶ ದ್ವಾರದ ಹೆದ್ದಾರಿಯ ಅಂಚಿನಲ್ಲಿ ಈ ರೀತಿ ತೋರಣ ಹಾಕುವ ಮೂಲಕ ಇಲ್ಲಿನ ಸಾರ್ವಜನಿಕರು ಸಾರ್ವತ್ರಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಹೇಳಿ ಕೇಳಿ ಈ ಬಡಾವಣೆಯಲ್ಲಿ ವಾಸವಿರುವವರು ಅಂತಿAತಹವರಲ್ಲ. ಒಂದು ರೀತಿ ಅಸಾಧಾರಣ ಅಸಾಮಾನ್ಯ ವ್ಯಕ್ತಿತ್ವದವರು.
ಅಂದರೆ ಬಹುಪಾಲು ಮಂದಿ ತಮ್ಮ ಧೀರ್ಘಾಯುಷ್ಯವನ್ನು ದೇಶಸೇವೆಗೆ ಸಮರ್ಪಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವವರು.
ಆರೋಗ್ಯ ಹಾಗೂ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿ ನಿವೃತ್ತರಾದವರು.
ಹೀಗೆ ತಮ್ಮದೇ ಆದ ನಿಟ್ಟಿನಲ್ಲಿ ಸಮಾಜಕ್ಕೆ ಕೊಡುಗೆ ನೀಡಿರುವ ಮತ್ತು ನೀಡುತ್ತಿರುವ ಬಹುಪಾಲು ಮಂದಿ ಇಲ್ಲಿ ಸಾಮೂಹಿಕವಾಗಿ ಕಳೆದ ಹತ್ತು ವರ್ಷಗಳ ಈಚೆಗೆ ನಿವೇಶನ ಖರೀದಿಸಿ ತಮ್ಮ ಕನಸಿನ ಸೌಧಗಳನ್ನು ಕಟ್ಟಿ ವಾಸವಿರುವವರು.
ಆದರೆ, ಸ್ಥಳೀಯ ಮುಳ್ಳುಸೋಗೆ ಗ್ರಾ.ಪಂ. ಈ ಬಡಾವಣೆಯ ಈ ಮಂದಿಯ ಮನೆಗಳ ಮುಂದೆ ಸುವ್ಯವಸ್ಥಿತ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು.
ಮೊದಲೇ ಮೂಲ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದ ಇಲ್ಲಿನ ಬಡಾವಣೆಯ ನಿವಾಸಿಗಳಿಗೆ ಕಳೆದ ಮೂರು ವರ್ಷಗಳಿಂದ ಬೆಂಬಿಡದೇ ಕಾಡುತ್ತಿರುವ ಕಾವೇರಿ ಪ್ರವಾಹ ಗಾಯದ ಮೇಲೆ ಬರೆ ಎಳೆದು ಇಲ್ಲಿನ ಜನರ ನೆಮ್ಮದಿಯನ್ನು ಸಂಪೂರ್ಣ ವಾಗಿ ಕಸಿದಿದೆ.
ಜೊತೆಗೆ ಒಳಚರಂಡಿ ಕಾಮಗಾರಿ ಎಂಬ ಅವೈಜ್ನಾನಿಕ ಯೋಜನೆ ಈ ಬಡಾವಣೆಯಲ್ಲಿನ ನಿವಾಸಿಗಳಿಗೆ ಮತ್ತೊಂದು ರೂಪದಲ್ಲಿ ಶಾಪವಾಗಿ ಕಾಡಿತ್ತು.
ಹಾಗಾಗಿ ಇಲ್ಲಿನ ನಿವಾಸಿಗಳು ಸಂಘಟಿತರಾಗಿ ಕುವೆಂಪು ಬಡಾವಣೆ ಹಿತರಕ್ಷಣಾ ಸಮಿತಿಯನ್ನು ರಚಿಸಿ ಆ ಮುಖೇನ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿ ಗಳಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ತಮ್ಮ ಬಡಾವಣೆಯ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿತ್ತು.
ಅಲ್ಲದೇ ಒಳಚರಂಡಿ ಯೋಜನೆಯ ಕಾಮಗಾರಿ ನದಿ ದಂಡೆಯಲ್ಲಿ ಹಾಯ್ದು ಹೋಗಿದ್ದುದರ ಪರಿಣಾಮ ನದಿ ದಂಡೆ ಕುಸಿದು ಆತಂಕವನ್ನು ಸೃಷ್ಟಿಸಿರುವ ಬಗ್ಗೆ ಸೂಕ್ತ ವ್ಯವಸ್ಥೆಗೆ ಆಗ್ರಹಿಸಿ ಆಡಳಿತಾರೂಢರ ಗಮನಕ್ಕೆ ತಂದರೂ ಕೂಡ ಏನೂ ಪರಿಹಾರ ಕಾಣದ್ದರಿಂದ ಕೊನೆಗೆ ಬೇಸತ್ತ ಹಿತರಕ್ಷಣಾ ಸಮಿತಿ ತಮ್ಮ ಬಡಾವಣೆಯ ಸಮಸ್ಯೆಗಳನ್ನು ಹೆದ್ದಾರಿ ಯಲ್ಲಿ ಸಾಗುವವರೆಲ್ಲಾ ನೋಡಲಿ. ನಾವು ನಿತ್ಯವೂ ಅನುಭವಿಸುತ್ತಿರುವ ಯಾತನೆಗಳು ಹೆದ್ದಾರಿಯಲ್ಲಿ ಸಂಚರಿಸುವ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾ ಹಂತದ ಅಧಿಕಾರಿಗಳ ಕಣ್ತೆರೆದು ಏನಾದರೂ ಪ್ರಯೋಜನ ಅಥವಾ ಪರಿಹಾರ ದೊರಕೀತಾ? ಎಂಬ ಹತಾಶೆ, ನೋವು, ನಿರಾಸೆ ತುಂಬಿದ ಆಶಾ ಭಾವನೆಯೊಂದಿಗೆ ಬಡಾವಣೆಯ ಪ್ರವೇಶ ದ್ವಾರದಲ್ಲಿ ತಮ್ಮ ಸಂಕಟಗಳ ಪ್ರತಿರೂಪಗಳನ್ನು ಚಿತ್ರ ಸಹಿತ ಪ್ರಕಟಿಸಿ ಹಾಕಿದ್ದಾರೆ.
ಇದೀಗ ಗ್ರಾ.ಪಂ. ಆಡಳಿತ ಮಂಡಳಿ ಪುನರ್ ರಚನೆ ಆಗುತ್ತಿದ್ದು ನಿರ್ಧಿಷ್ಟ ಅವಧಿಯ ನಂತರ ಪಂಚಾಯಿತಿಗೆ ಬೀಗ ಹಾಕಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಬಡಾವಣೆಗೆ ಬಂದು ಸಮಸ್ಯೆಗೆ ಸ್ಥಳದಲ್ಲೇ ಸೂಕ್ತ ಪರಿಹಾರ ಘೋಷಿಸುವವರೆಗೂ ಹೋರಾಟ ರೂಪಿಸುವುದಾಗಿ ಬಡಾವಣೆಯ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹೇಳುತ್ತಾರೆ.
ಕಾವೇರಿ ನದಿ ಪ್ರವಾಹ ಸಂದರ್ಭ ದಲ್ಲಿ ಮನೆಗಳು ಮುಳುಗಿದಾಗ ರಾಜಧಾನಿಯಿಂದ ಬರುವ ಸರ್ಕಾರದ ಪ್ರತಿನಿಧಿಗಳಾದ ಸಚಿವರು ಅಥವಾ ಉಸ್ತುವಾರಿ ಸಚಿವರು ಕೇವಲ ಕುಶಾಲನಗರದ ರಸ್ತೆ ಬದಿಯ ಒಂದೆರಡು ಬಡಾವಣೆ ಗಳಿಗೆ ಭೇಟಿ ಕೊಟ್ಟು ತೆರಳುತ್ತಾರೆ ವಿನಃ ಕುವೆಂಪು ಬಡಾವಣೆಯ ನಿವಾಸಿಗಳ ಸಂಕಷ್ಟವನ್ನು ಕೇಳಲು ಅಥವಾ ನೋಡಿ ಪರಿಹರಿಸಲು ಯಾರೊಬ್ಬರೂ ಧಾವಿಸುವುದಿಲ್ಲ.
ಹೆದ್ದಾರಿಯಲ್ಲಿ ಸಾಗುವ ಸಂದರ್ಭದಲ್ಲಾದರೂ ನಿಜವಾದ ಸೇವಾ ಮನೋಭಾವದ ರಾಜಕಾರಣಿ ಗಳು, ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ನೋಡಿ ನಮ್ಮ ಸಮಸ್ಯೆ ಗಳಿಗೆ ಒಂದಷ್ಟು ಸಾಂತ್ವನ ವಾದರೂ ದೊರಕೀತೇ ಎಂದು ಈ ರೂಪದ ಹೋರಾಟಕ್ಕೆ ಧುಮುಕಿರುವುದಾಗಿ ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಪಂಡ ಕಾವೇರಪ್ಪ, ನಿವೃತ್ತ ಯೋಧ ಅಮೆ ಜನಾರ್ಧನ್ ಮತ್ತಿತರರು ಹೇಳುತ್ತಾರೆ.
ಒಟ್ಟಾರೆ ಕುವೆಂಪು ಬಡಾವಣೆಯ ಪ್ರಜ್ಞಾವಂತ ನಿವಾಸಿಗಳ ನೋವು, ನಲಿವುಗಳನ್ನು ಸರ್ಕಾರ ಅಥವಾ ಜಿಲ್ಲಾಡಳಿತ ಆಲಿಸಬೇಕಿದೆ ಅಷ್ಟೇ.
-ಕೆ.ಎಸ್. ಮೂರ್ತಿ