ನಾಪೋಕ್ಲು, ಜ. ೧೬: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಾಫಿಯ ಹೂಗಳು ಅರಳಿದ್ದು ಬೆಳೆಗಾರರು ಕಾಫಿ ಕುಯ್ಲು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹಲವೆಡೆ ಕುಯ್ಲು ಮಾಡಿದ ಕಾಫಿ ಕಣದಲ್ಲಿ ಒಣಗಲು ಹಾಕಿದ್ದು ಬಿಸಿಲಿನ ಕೊರತೆಯಿಂದ ಕೊಳೆಯತೊಡಗಿದೆ. ಪ್ರತಿದಿನ ಮೋಡ ಕವಿದ ವಾತಾವರಣವಿದ್ದು ಕಾಫಿ ಬೆಳೆಗಾರರು ಕುಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಮತ್ತೊಂದೆಡೆ ಅಕಾಲಿಕ ಮಳೆಯಿಂದ ಹೂಗಳು ಅರಳಿದ್ದು ಕಾಫಿ ಕುಯ್ಲಿಗೆ ತೊಡಕಾಗಿದೆ. ಮಳೆಯಿಂದಾಗಿ ಕಾಫಿ ಹಣ್ಣುಗಳು ಉದುರಿ ಬೀಳುತ್ತಿದ್ದು ಸಂಕಷ್ಟ ಅನುಭವಿಸುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಭತ್ತದ ಕುಯ್ಲು ಮಾಡಿದ್ದು ಸಾಕಷ್ಟು ಹಾನಿಯುಂಟಾಗಿದೆ. ಕುಯ್ಲು ಮಾಡಿದ ಭತ್ತದ ಪೈರುಗಳು ಮಳೆಯಿಂದ ಕೊಳೆಯುತ್ತಿದ್ದು ಭತ್ತವನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ನಾಪೋಕ್ಲು ವ್ಯಾಪ್ತಿಯ ನೆಲಜಿ, ಬಲ್ಲಮಾವಟಿ ಮತ್ತಿತರ ಭಾಗಗಳಲ್ಲಿ ಭತ್ತ ಕುಯ್ಲು ಮಾಡಲಾಗಿದ್ದರೂ ಸಂರಕ್ಷಿಸಲು ಹೆಣಗಾಡುತ್ತಿದ್ದಾರೆ.

-ದುಗ್ಗಳ