ಮಡಿಕೇರಿ, ಜ.೧೫: ಕೋವಿಡ್ ಲಸಿಕಾ ಅಭಿಯಾನಕ್ಕೆ ತಾ. ೧೬ ರಂದು (ಇಂದು) ಜಿಲ್ಲೆಯ ಐದು ಸ್ಥಳಗಳಲ್ಲಿ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ಈಗಾಗಲೇ ೪,೦೦೦ ಲಸಿಕೆ ತಲುಪಿದ್ದು, ಲಸಿಕಾ ಅಭಿಯಾನಕ್ಕೆ ತಾ. ೧೬ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು. ಜಿಲ್ಲೆಯ ೫ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆಯ ತಾಲೂಕು ಆಸ್ಪತ್ರೆ, ವೀರಾಜಪೇಟೆ ತಾಲೂಕು ಆಸ್ಪತ್ರೆ, ಸಂತ ಮೈಕಲರ ಶಾಲೆಯಲ್ಲಿ ತಲಾ ೧೦೦ ಮಂದಿಗೆ ಹಾಗೂ ಕಾಕೋಟುಪರಂಬು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೭೪ ಸೇರಿದಂತೆ ಒಟ್ಟು ೪೭೪ ಮಂದಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿದರು. (ಮೊದಲ ಪುಟದಿಂದ) ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ೬,೫೬೦ ಕೊರೊನಾ ವಾರಿಯರ್ಸ್ನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದರು.ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ಡಿವೈಎಸ್‌ಪಿ ಶೈಲೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಡಾ.ಲೋಕೇಶ್, ಡಾ.ಮಹೇಶ್, ಡಾ.ಗೋಪಿನಾಥ್ ಇತರರು ಇದ್ದರು. ನಿನ್ನೆ ದಿನ ಲಸಿಕೆಯನ್ನು ಮಡಿಕೇರಿಗೆ ತರಿಸಿಕೊಳ್ಳಲಾಯಿತು. ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ಲಸಿಕೆ ಸ್ವೀಕರಿಸಿದರು. ಡಾ. ಆನಂದ್ ಇತರರು ಇದ್ದರು.