ಕೂಡಿಗೆ, ಜ. ೧೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಲ್ಲಿ ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದವರೆಗೆ ಬೇಸಿಗೆ ಬೆಳೆಗೆ ನೀರು ಒದಗಿಸಲು ಯೋಜನೆ ಇರುವುದರಿಂದ ಈ ಬಾರಿ ಅಣೆಕಟ್ಟೆಯಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆ ಬೆಳೆಗೆ ನೀರನ್ನು ಹರಿಸುವಂತೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಹಾರಂಗಿ ಜಲಾಶಯದಿಂದ ಭತ್ತದ ಬೆಳೆಗೆ ನೀರನ್ನು ನೀಡಲಾಗಿತ್ತು. ಇದೀಗ ಮುಖ್ಯ ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸಲಾಗಿದೆ. ಅಣೆಕಟ್ಟೆಯ ನೀರನ್ನು ಅನಾವಶ್ಯಕವಾಗಿ ನದಿಗೆ ಹರಿಬಿಡುವ ಬದಲು ಸಂಗ್ರಹ ಮಾಡಿ ಈ ಬಾರಿ ರೈತರು ಸಂಕಷ್ಟದಲ್ಲಿರುವುದರಿAದ ಕೊಡಗಿನ ಗಡಿ ಭಾಗದವರೆಗೆ ನೀರು ಹರಿಸುವಂತೆ ಅಚ್ಚುಕಟ್ಟು ವ್ಯಾಪ್ತಿಯ ಜಿಲ್ಲೆಯ ನಾಲ್ಕು ನೀರು ಬಳಕೆದಾರರ ಸಹಕಾರ ಸಂಘ ಅಧ್ಯಕ್ಷರು, ವ್ಯಾಪ್ತಿಯ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ರೈತರು ಮನವಿ ಮಾಡಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಸಮಗ್ರವಾದ ಮಾಹಿತಿಯನ್ನು ಪಡೆದು ಹಾರಂಗಿಯಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.