ಕುಶಾಲನಗರ, ಜ. ೧೩: ಕುಶಾಲನಗರ ಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎA.ಚರಣ್ ತಿಳಿಸಿದರು. ಕುಡಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿ ೩ ತಿಂಗಳು ಕಳೆದಿದೆ. ಪ್ರಸ್ತುತ ಪ್ರಾಧಿಕಾರದಲ್ಲಿರುವ ರೂ ೩೦ ಲಕ್ಷ ಹಣವನ್ನು ವಿನಿಯೋಗಿಸಿ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಸಕರ ಮೂಲಕ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕುಶಾಲನಗರ ಪಟ್ಟಣ ಅರಣ್ಯ ಮತ್ತು ನದಿಯಿಂದ ಸುತ್ತುವರೆದಿರುವ ಕಾರಣ ಭೂಮಿ ವಿಸ್ತೀರ್ಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕುಶಾಲನಗರ ಪಟ್ಟಣದಲ್ಲಿ ಪ್ರಸ್ತುತ ೩೦*೪೦ ಅಳತೆಯ ನಿವೇಶನದಲ್ಲಿ ನೆಲಅಂತಸ್ತು, ೧ನೆ ಮಹಡಿ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಇದನ್ನು ಬದಲಾಯಿಸಿ ಹೆಚ್ಚುವರಿ ಅಂತಸ್ತು ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುವುದು. ೧೯೭೬ ನಂತರ ಕುಶಾಲನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಹಲವು ಬಡಾವಣೆಗಳು ನಿರ್ಮಾಣಗೊಂಡಿದೆ. ಇವುಗಳ ಪೈಕಿ ನಿಗದಿತ ಮಾನದಂಡ ಪಾಲಿಸದೆ ನಿಯಮಬಾಹಿರವಾಗಿ ನಿರ್ಮಾಣಗೊಂಡಿರುವ ಕೆಲವು ಬಡಾವಣೆಗಳು ಇರುವುದಾಗಿ ತಿಳಿಸಿದರು. ಸರಕಾರದ ಮಾರ್ಗಸೂಚಿಯಂತೆ ಮೂಲಭೂತ ಸೌಕರ್ಯ ಕಲ್ಪಿಸದೆ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯಿದೆ. ಇದರಿಂದ ಹಲವು ಮಂದಿಗೆ ತೀವ್ರ ಅನಾನುಕೂಲ ಸೃಷ್ಠಿಯಾಗಿದೆ. ಪ್ರಾಧಿಕಾರ ಮೂಲಕ ತಿರಸ್ಕೃತವಾದ ಬಹುತೇಕ ೯/೧೧ ಅರ್ಜಿಗಳು ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಅನುಮೋದನೆಗೊಳ್ಳುತ್ತಿರುವುದು ಗೊಂದಲ ಉಂಟುಮಾಡಿದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ನಿಗದಿತ ಶುಲ್ಕ ವಿಧಿಸಿ ಅನುಮತಿ ಕಲ್ಪಿಸಲು ಪ್ರಾಧಿಕಾರಕ್ಕೆ ಅಧಿಕಾರ ನೀಡಲು ಪ್ರಸ್ತಾವನೆ ಸಿದ್ದಪಡಿಸಿ ಶಾಸಕರ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು. ಕುಶಾಲನಗರದಲ್ಲಿ ಇರುವ ಕೆರೆಗಳ ಅಭಿವೃದ್ಧಿಗೂ ಚಿಂತನೆ ಹರಿಸಲಾಗಿದೆ. ಹೆದ್ದಾರಿಗೆ ಹೊಂದಿಕೊAಡAತಿರುವ ತಾವರೆಕೆರೆ ಅಭಿವೃದ್ಧಿ ಬಗ್ಗೆ ಚಿಂತಿಸಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಪ್ರವಾಹ ಉಂಟಾದ ಸಂದರ್ಭ ಹೆದ್ದಾರಿ ಮುಳುಗಡೆಯಾಗುವ ಕಾರಣ ಹೆದ್ದಾರಿ ಪ್ರಾಧಿಕಾರದಿಂದ ಫ್ಲೆöÊಓವರ್ ನಿರ್ಮಿಸುವ ಚಿಂತನೆಯಿದ್ದಲ್ಲಿ ತಾವರೆಕೆರೆಯನ್ನು ಕೈಬಿಟ್ಟು ಉಳಿದ ಯಾವುದಾದರು ಒಂದು ಸೂಕ್ತ ಕೆರೆಯನ್ನು ಗುರುತಿಸಿ ಯೋಜನಾ ಪ್ರಾಧಿಕಾರದ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಚರಣ್ ತಿಳಿಸಿದರು.
ಇದೇ ಸಂದರ್ಭ ಮಾತನಾಡಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್, ಪ್ರಾಧಿಕಾರದ ಮೂಲಕ ನಾಗರಿಕರಿಗೆ ಎಲ್ಲಾ ರೀತಿಯ ಅಗತ್ಯ ಸೇವೆಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಯಾವುದೇ ಸಂದರ್ಭ ನಿಯಮ ಬಾಹಿರ ಬಡಾವಣೆಗಳಲ್ಲಿ ನಿವೇಶನ ಖರೀದಿಸುವ ಸಂದರ್ಭ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು. ಹೆಚ್ಚಿನ ಮಾಹಿತಿ ಅವಶ್ಯಕತೆಯಿದ್ದಲ್ಲಿ ಕಚೇರಿಗೆ ಭೇಟಿ ನೀಡಿ ಪಡೆಯಬಹುದು ಎಂದು ಅವರು ತಿಳಿಸಿದರು. ಈ ಸಂದರ್ಭ ಪ್ರಾಧಿಕಾರದ ಸದಸ್ಯ ವೈಶಾಖ್ ಇದ್ದರು.