ಸಿದ್ದಾಪುರ, ಜ. ೧೩: ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿ ಮಾಡಿದ ಕೃಷಿಕರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಫಿ ಬೆಳೆಗಾರರು ಕುಯ್ಲು ಮಾಡಿದ ಕಾಫಿ ಒಣ ಹಾಕಲು ಹಾಕಿದ ಜಾಗದಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದಲ್ಲದೇ ಕಾಫಿ ಕುಯ್ಲು ಮುಂಚಿತವಾಗಿ ಮಳೆ ಸುರಿದ ಹಿನ್ನೆಲೆ ಕಾಫಿ ಗಿಡಗಳಲ್ಲಿ ಹೂ ಬಿಟ್ಟಿದ್ದು, ಬೆಳೆಗಾರರಿಗೆ ಸಮಸ್ಯೆಯಾಗಿದೆ. ಸಿದ್ದಾಪುರದ ಗುಹ್ಯ ಗ್ರಾಮದ ಕಾಫಿ ಬೆಳೆಗಾರರು ಹಾಗೂ ವಕೀಲ ಎಂ.ಎಸ್. ವೆಂಕಟೇಶ್ ಅವರ ಕಾಫಿ ತೋಟಗಳಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಗಿಡಗಳಲ್ಲಿ ಹಣ್ಣಾಗಿರುವ ಕಾಫಿಗಳು ಉದುರಿ ಕೆಳಗೆ ಬಿದ್ದಿದ್ದು, ನಷ್ಟ ಸಂಭವಿಸಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಕಾಫಿ ಫಸಲುಗಳು ಕುಯ್ಲು ಮಾಡಿ ಒಣ ಹಾಕಲು ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದ ಅವರು, ತಾನು ಹಸಿ ಹಣ್ಣು ಕಾಫಿಗಳನ್ನು ಕುಯ್ಲು ಆದ ಕೂಡಲೇ ಮಾರಾಟ ಮಾಡುತ್ತಿರು ವುದಾಗಿ ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾಪುರದ ಕರಡಿಗೋಡು ಭಾಗದಲ್ಲಿ ಅಕಾಲಿಕ ಮಳೆಗೆ ಸಿಲುಕಿ ಕಣದಲ್ಲಿ ಒಣ ಹಾಕಿದ ಕಾಫಿಗಳು ನೀರಿನಲ್ಲಿ ಕೊಚ್ಚಿ ಹೋಗಿ ತೋಡು ಪಾಲಾಗಿ ನಷ್ಟ ಉಂಟಾಗಿದೆ. ಮೋಡ ಕವಿದ ವಾತಾವರಣದಿಂದಾಗಿ ಬೆಳೆಗಾರರು, ಕೃಷಿಕರು ಸಂಕಷ್ಟಕ್ಕೆ ಸಿಲುಕಿ ಕೊಂಡಿರುವುದು ದುರದೃಷ್ಟಕರವಾಗಿದೆ.