ಗೋಣಿಕೊಪ್ಪ ವರದಿ, ಜ. ೧೨: ತಾ. ೧೩ ರಿಂದ ೨೬ ರವರೆಗೆ ಕೇರಳದ ಉಳಿಕಲ್‌ನಲ್ಲಿ ನಡೆಯಲಿರುವ ಬೈತೂರು ನಮ್ಮೆಗೆ ಕೊಡಗು ಜಿಲ್ಲೆಯಿಂದ ತೆರಳಲು ದಿನವೊಂದಕ್ಕೆ ೭೦ ಪಾಸ್ ವಿತರಣೆ ಮಾಡಲು ಪುಗ್ಗೇರ ಕುಟುಂಬ ಮುಂದಾಗಿದೆ ಎಂದು ಬೈತೂರು ನಮ್ಮೆ ತಕ್ಕರಾದ ಪುಗ್ಗೇರ ಪೊನ್ನಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗಡಿಯಲ್ಲಿ ತಪಾಸಣೆ, ಥರ್ಮಲ್ ಟೆಸ್ಟ್ ನಂತರ ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿದೆ. ವೀರಾಜಪೇಟೆ ಸರ್ಕಾರಿ ಬಸ್ ನಿಲ್ದಾಣದ ಸಮೀಪವಿರುವ ಅಮ್ಮಣಕುಟ್ಟಂಡ ಕಿರಣ್ ಅವರ ಕಾಫಿ ವ್ಯಾಪಾರ ಮಳಿಗೆಯಲ್ಲಿ ಆದ್ಯತೆಯಂತೆ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಪ್ರಮಾಣ ಹೆಚ್ಚಾಗುತ್ತಿ ರುವುದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಪಾಸ್ ಇಲ್ಲದೆ ತೆರಳುವವರಿಂದ ತೊಂದರೆ ಆಗುವುದರಿಂದ ತಕ್ಕರ ಮೇಲೆ ಕ್ರಮಕೈಗೊಳ್ಳುವ ಎಚ್ಚರಿಕೆ ಕೂಡ ಇಲಾಖೆ ನೀಡಿದೆ.

ಇದನ್ನು ಭಕ್ತರು ಅರಿತುಕೊಂಡು ಸಾಂಪ್ರದಾಯಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕಿದೆ. ಪರಿಸ್ಥಿತಿ ತೀರಾ ತೊಂದರೆಯಲ್ಲಿರುವುದರಿAದ ಭಕ್ತರು ಮುಂದಿನ ವರ್ಷಕ್ಕೆ ಬೈತೂರು ನಮ್ಮೆಯಲ್ಲಿ ಪಾಲ್ಗೊಳ್ಳಲು ಯೋಜನೆ ರೂಪಿಸಿಕೊಳ್ಳುವುದು ಒಳಿತು. ಅನಾವಶ್ಯಕ ಗೊಂದಲಕ್ಕೆ ಎಡೆ ಮಾಡಿಕೊಡದೆ, ಜಿಲ್ಲೆಯ ೮ ಕಡೆಗಳಲ್ಲಿ ತೆರೆದಿರುವ ಪೂಜಾ ಚೀಟಿ ನೋಂದಣಿ ಮಾಡಿಕೊಂಡು ಸಹಕರಿಸ ಬೇಕು ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.