ಮಡಿಕೇರಿ, ಜ. ೧೨: ಕೊಡಗು ಗೌಡ ಜನಾಂಗದ ನಡುವೆ ಈ ಹಿಂದಿನಿAದಲೂ ನಡೆಸಿಕೊಂಡು ಬರುತ್ತಿದ್ದ ಕುಟುಂಬವಾರು ಕ್ರಿಕೆಟ್ ಪಂದ್ಯಾವಳಿಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಕೊಡಗು ಗೌಡ ಯುವ ವೇದಿಕೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿಂದು ವೇದಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ೨೦೧೮ರಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಿAದ ಪಂದ್ಯಾವಳಿ ನಡೆಸಲಾಗಿಲ್ಲ, ೨೦೧೯ರಲ್ಲಿ ಸೀಮಿತ ತಂಡಗಳ ಪಂದ್ಯಾವಳಿ ನಡೆಸಲಾಗಿತ್ತು. ೨೦೨೦ರಲ್ಲಿ ಅದ್ಧೂರಿಯಾಗಿ ವೇದಿಕೆಯಿಂದಲೇ ಪಂದ್ಯಾವಳಿ ಆಯೋಜನೆ ಮಾಡುವ ಉದ್ದೇಶ ಇತ್ತಾದರೂ ಕೊರೊನಾ ಹಿನ್ನೆಲೆಯಲ್ಲಿ ನಡೆಸಲು ಸಾಧ್ಯವಾಗಿಲ್ಲ. ಇದೀಗ ಲಾಕ್‌ಡೌನ್ ನಿಯಮ ಸಡಿಲಿಕೆಯಾಗಿದ್ದು, ಎಲ್ಲೆಡೆ ವಿವಿಧ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳು ಕೂಡಾ ಆರಂಭ ಗೊಂಡಿವೆ. ಜನಾಂಗೀಯ ಕ್ರೀಡಾಕೂಟ ಗಳು ಕೂಡ ನಡೆಯುತ್ತಿರುವದರಿಂದ ಈ ಬಾರಿ ಗೌಡ ಜನಾಂಗದ ಕ್ರೀಡಾಕೂಟ ಹಮ್ಮಿಕೊಳ್ಳುವ ಬಗ್ಗೆ ಅಧ್ಯಕ್ಷರು ಸಲಹೆ ಸೂಚನೆಗಳನ್ನು ಬಯಸಿದರು. ಸಭೆಯಲ್ಲಿ ಹಾಜರಿದ್ದ ನಿರ್ದೇಶಕರುಗಳು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಮೊದಲು ನೋಂದಾಯಿಸಿಕೊಳ್ಳುವ ೧೦೦ ತಂಡಗಳಿಗೆ ಪ್ರಥಮ ಆದ್ಯತೆಯೊಂದಿಗೆ ಪಂದ್ಯಾವಳಿಯನ್ನು ಕೋವಿಡ್ ನಿಯಮದಡಿ ಇತಿಮಿತಿಯಲ್ಲಿ ನಡೆಸುವ ಬಗ್ಗೆ ಸಲಹೆಗಳು ಕೇಳಿಬಂದವು. ಅಲ್ಲದೆ, ಈ ಬಾರಿ ಮಡಿಕೇರಿ ನಗರ ಹೊರತು ಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಯಾವುದಾದರೂ ಕುಟುಂಬ ಪ್ರಾಯೋಜಕತ್ವ ವಹಿಸಿಕೊಂಡು ಮುಂದೆ ಬಂದಲ್ಲಿ ಅದಕ್ಕೂ ಅವಕಾಶ ನೀಡುವ ಬಗ್ಗೆಯೂ ಸಲಹೆ ಕೇಳಿ ಬಂದಿತು. ಸಮಯ ಹಾಗೂ ಸಂದರ್ಭ ನೋಡಿಕೊಂಡು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು.

ಇದರೊಂದಿಗೆ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗುವ ಇತರ ಚಟುವಟಿಕೆಗಳ ಬಗ್ಗೆ, ವೇದಿಕೆಗೆ ಆರ್ಥಿಕ ಕ್ರೋಢೀಕರಣದ ಬಗ್ಗೆಯೂ ಚರ್ಚಿಸ ಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷಣ, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಮನೋಜ್, ನಿರ್ದೇಶಕರುಗಳು ಪಾಲ್ಗೊಂಡಿದ್ದರು.