ಕೂಡಿಗೆ, ಜ. ೧೨: ಕಾಡಾನೆ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸಮೀಪದ ಮರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಕರುವನ್ನು ಕಾಡಾನೆ ಎಳೆದೊಯ್ದು ಕೊಂಬಿನಲ್ಲಿ ತಿವಿದು ಬಲಿ ತೆಗೆದುಕೊಂಡಿದೆ.
ಕಳೆದ ಮೂರು ತಿಂಗಳಿAದಲೂ ಬಾಣಾವರ ಮೀಸಲು ಅರಣ್ಯ ಚಿನ್ನೇನಹಳ್ಳಿ ಮಾರ್ಗದ ಮೂಲಕ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ಸೇರಿದ ಹಳೆಗೋಟೆ, ಮರೂರು, ೬ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಜನರು ಭಯಭೀತರಾಗಿದ್ದಾರೆ.
ಸುಮಾರು ೯ ಕಾಡಾನೆಗಳಿರುವ ಈ ಹಿಂಡು ಪಟಾಕಿಗಳಿಗೂ ಭಯ ಪಡದೆ, ಅರಣ್ಯ ಇಲಾಖೆಯವರು ಓಡಿಸಿದರೂ ಕಾಡಿನತ್ತ ಹೋಗದೆ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿವೆ.
ಶೀಘ್ರವೇ ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಈ ಭಾಗಗಳ ರೈತರುಗಳಾದ ಮಹದೇವ, ಮರೂರು ನಾಗಣ್ಣ, ಜಯಣ್ಣ, ಜಯಪ್ರಕಾಶ್, ನಾರಾಯಣ್, ತಮ್ಮಣ್ಣ ಸೇರಿದಂತೆ ಇನ್ನಿತರರು ಒತ್ತಾಯಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ.