ವೀರಾಜಪೇಟೆ,ಜ. ೧೧: ಕಳೆದ ೪೦ ದಿನಗಳ ಹಿಂದೆ ಕೇರಳ ರಾಜ್ಯದ ಎರಡು ಕಡೆಗಳಲ್ಲಿ ಹಕ್ಕಿ ಜ್ವರ, ಕೋಳಿ ಜ್ವರ ಕಾಣಿಸಿಕೊಂಡಿತ್ತು. ಇದರಿಂದಾಗಿ ಕೇರಳದಿಂದ ಕೋಳಿ ಹಾಗೂ ಅದರ ಉತ್ಪನ್ನಗಳನ್ನು ಕೊಡಗು ಸೇರಿದಂತೆ ಕರ್ನಾಟಕಕ್ಕೆ ಸಾಗಿಸಲು ನಿಷೇಧ ಹಾಗೂ ನಿರ್ಬಂಧ ವಿಧಿಸಲಾಗಿದ್ದು ದಕ್ಷಿಣ ಕೊಡಗಿನ ಕುಟ್ಟ, ಮಾಕುಟ್ಟ ಗಡಿ ಪ್ರದೇಶಗಳಲ್ಲಿ ಪಶು ಸಂಗೋಪನೆ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ ತೀವ್ರ ನಿಗಾ ಇರಿಸಲಾಗಿದೆ.ಕರ್ನಾಟಕದ ಮೈಸೂರು, ಹುಣಸೂರು, ಹಾಸನ ಸೇರಿದಂತೆ ವಿವಿಧೆಡೆಗಳಿಂದ ಕೋಳಿ ಹಾಗೂ ಅದರ ಉತ್ಪನ್ನಗಳು ನಿರಂತರವಾಗಿ ಕರ್ನಾಟಕದಲ್ಲಿ ನೋಂದಣಿಯಾದ ಲಾರಿಗಳಿಂದ ಕೇರಳಕ್ಕೆ ಸಾಗಾಟ ವಾಗುತ್ತಿದ್ದು ಕೋಳಿ ಸಾಗಿಸಿದ ಲಾರಿಗಳು ಅಲ್ಲಿಂದ ಹಿಂತಿರುಗಿ ಬಂದಾಗ ಕುಟ್ಟ, ಮಾಕುಟ್ಟ ಗೇಟ್‌ಗಳಲ್ಲಿ ಲಾರಿಗೆ ಪೂರ್ತಿಯಾಗಿ ಸ್ಯಾನಿಟೈಸ್ ಮಾಡಿ, ತಪಾಸಣೆಗೊಳ ಪಡಿಸಿದ ನಂತರವೇ ಲಾರಿಗಳನ್ನು ಕರ್ನಾಟಕದ ಪ್ರವೇಶಕ್ಕೆ ಅನುವು ಮಾಡಿಕೊಡ ಲಾಗುತ್ತಿದೆ.

(ಮೊದಲ ಪುಟದಿಂದ) ದಕ್ಷಿಣ ಕೊಡಗಿನ ಆಯ್ದ ಭಾಗಗಳಿಂದ ಎಲ್ಲ ರೀತಿಯ ಕೋಳಿಗಳ ಹಿಕ್ಕೆಗಳನ್ನು ಪರೀಕ್ಷೆಗಾಗಿ ಮೈಸೂರು ಹಾಗೂ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಇದೇ ರೀತಿಯಲ್ಲಿ ವಿವಿಧ ಜಾತಿಯ ಪಕ್ಷಿಗಳ, ಬಾತುಕೋಳಿ, ಕೊಕ್ಕರೆಗಳ ಹಿಕ್ಕೆಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ಹಕ್ಕಿ ಜ್ವರಕ್ಕೆ ಸಂಬAಧಿಸಿ ದಂತೆ ನೆಗೆಟಿವ್ ಫಲಿತಾಂಶ ಬಂದಿದೆ. ಇದರಿಂದಾಗಿ ಕೊಡಗಿನಲ್ಲಿ ಹಕ್ಕಿ ಜ್ವರದ ಬಾಧೆ ಇಲ್ಲ. ಕೊಡಗಿನಲ್ಲಿಯೂ ಹಕ್ಕಿ, ಕೋಳಿ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಶು ಸಂಗೋಪನಾ ಇಲಾಖೆಯಿಂದ ಆರು ಕ್ಷಿಪ್ರ ಪಡೆಯನ್ನು ರಚಿಸಲಾಗಿದೆ. ಈ ಕ್ಷಿಪ್ರ ಪಡೆಯಲ್ಲಿ ಇಲಾಖೆಯ ವೈದ್ಯರುಗಳು, ಸಿಬ್ಬಂದಿ, ಡಿ.ಗ್ರೂಪ್ ನೌಕರರು ಕಾರ್ಯ ನಿರ್ವಹಿಸುತ್ತಿ ದ್ದಾರೆ. ಹಕ್ಕಿ ಜ್ವರದ ಸೂಕ್ಷö್ಮ ಕಂಡು ಬಂದಲ್ಲಿ ಈ ಕ್ಷಿಪ್ರಪಡೆ ತಕ್ಷಣ ಅಲ್ಲಿಗೆ ತೆರಳಿ ಪರಿಹಾರ ಕ್ರಮ ಕೈಗೊಳ್ಳಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗ ಸೂಚಿಯಂತೆ ಈ ಪಡೆ ಕಾರ್ಯ ನಿರ್ವಹಿಸಲಿದೆ ಎಂದು ವೀರಾಜಪೇಟೆ ಪಶುಸಂಗೋಪನ ವೈದ್ಯ ಡಾ. ತಮ್ಮಯ್ಯ ತಿಳಿಸಿದ್ದಾರೆ.ಹಕ್ಕಿ ಜ್ವರದ ಆತಂಕ ಬೇಡ: ಇಲಾಖೆ ಸ್ಪಷ್ಟನೆ ಕೇರಳದಲ್ಲಿ ಕಾಣಿಸಿಕೊಂಡು ಈಗ ನಿಯಂತ್ರಣದಲ್ಲಿರುವ ಹಕ್ಕಿ ಜ್ವರ ರೋಗ ಹರಡದಂತೆ ಸರಕಾರವೇ ಮುನ್ನೆಚ್ಚರಿಕೆ ವಹಿಸಿದೆ. ಹಕ್ಕಿ ಜ್ವರದ ಪ್ರಚಾರದಿಂದ ಕೊಡಗಿನಲ್ಲಿ ಕೋಳಿ ಉದ್ಯಮಕ್ಕೂ ಅಡಚಣೆ, ಹಿಂದೇಟು ಉಂಟಾಗಿತ್ತು ಕೊಡಗಿನಲ್ಲಿ ಹಕ್ಕಿಜ್ವರದ ಆತಂಕವಿಲ್ಲ. ಕೋಳಿ ಮಾಂಸವನ್ನು ಯಾವ ಭಯ ಭೀತಿ ಇಲ್ಲದೆ ಮುಕ್ತವಾಗಿ ಸೇವಿಸಬಹುದು. ಶುಚಿತ್ವ ಕಾಪಾಡಿಕೊಂಡು ಅದನ್ನು ಚೆನ್ನಾಗಿ ಬೇಯಿಸಿದರೆ ಉತ್ತಮ. ಪಶು ಸಂಗೋಪನಾ ಇಲಾಖೆ ಹಕ್ಕಿ ಹಾಗೂ ಕೋಳಿ ಜ್ವರ ಬರದಂತೆ, ಹರಡದಂತೆ ವಿಶೇಷ ಕಾಳಜಿ ವಹಿಸಿದೆ ಎಂದು ಡಾ:ತಮ್ಮಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಪಟ್ಟಣದಲ್ಲಿ ಹದಿನೈದರಿಂದ ಇಪ್ಪತ್ತು ಕೋಳಿ ಮಾಂಸ ಮಾರಾಟದ ಅಂಗಡಿಗಳಿದ್ದು, ಇತ್ತೀಚೆಗೆ ೧೫-೨೦ ದಿನಗಳಿಂದ ಕೋಳಿ ಮಾಂಸದ ಮಾರಾಟ ಬೆಲೆ ಕಡಿಮೆ ಇದ್ದರೂ ಹಕ್ಕಿ ಜ್ವರದ ಆತಂಕದಿAದ ಇದನ್ನು ಖರೀದಿಸವವರು ವಿರಳವಾಗಿದ್ದರು. ಇದೀಗ ಎಲ್ಲಾ ಕೋಳಿ ಮಾಂಸ ಮಾರಾಟದ ಅಂಗಡಿಗಳಲ್ಲಿ ಶುಚಿತ್ವ ಕಾಪಾಡುವಂತೆ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾರಾಟಗಾರರಿಗೆ ಸೂಚನೆ ನೋಟೀಸ್ ನೀಡಿದೆ.

- ಡಿ.ಎಂ.ಆರ್