*ಸಿದ್ದಾಪುರ, ಜ. ೧೧ : ಅಕಾಲಿಕ ಮಳೆಯಿಂದಾಗಿ ಕೊಡಗಿನ ರೈತರು ಹಾಗೂ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತ್ತಾಗಿದ್ದಾರೆ. ದೇಶದ ಬೆನ್ನೆಲುಬು ಎನಿಸಿಕೊಂಡವರ ಮೂಳೆಯೇ ಮುರಿದ ಸ್ಥಿತಿಯಲ್ಲಿ ಜಿಲ್ಲೆಯ ಕೃಷಿಕ ವರ್ಗವಿದೆ. ಅಕಾಲಿಕ ಮಳೆ ಸುರಿದು ಕಾಫಿ, ಭತ್ತ, ಏಲಕ್ಕಿ, ಅಡಿಕೆ ಸಂಪೂರ್ಣ ನಾಶವಾಗಿದೆ. ಗಿಡದಲ್ಲಿರುವ ಕಾಫಿ ಕೊಳೆಯುತ್ತಿದ್ದರೆ, ಒಣಗಲು ಹಾಕಿದ ಫಸಲು ಅತಿಯಾದ ಮಳೆಗೆ ಕೊಚ್ಚಿಹೋಗಿದೆ. ಕೊಯ್ಲಿಗೆ ಬಂದಿದ್ದ ಭತ್ತ ನೀರು ಪಾಲಾಗಿದೆ. ಕಾರ್ಮಿಕರ ಕೊರತೆ, ನಿರ್ವಹಣಾ ವೆಚ್ಚ ದುಬಾರಿ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಇರುವುದು, ವನ್ಯಜೀವಿಗಳ ಹಾವಳಿ ಹೀಗೆ ಅನೇಕ ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿರುವ ಕೃಷಿಕ ವರ್ಗ ಇದೀಗ ಮತ್ತೆ ದೊಡ್ಡ ಹೊಡೆತಕ್ಕೆ ಸಿಲುಕಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಪರಿಸ್ಥಿತಿಯಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಅಗತ್ಯವಾಗಿ ಬರಬೇಕಿದೆ.
ತ್ಯಾಗತ್ತೂರು ವ್ಯಾಪ್ತಿಯಲ್ಲಿ ೧೨೦ ಎಕರೆಗೂ ಅಧಿಕ ಪ್ರದೇಶದ ಭತ್ತ ನೀರು ಪಾಲಾಗಿದೆ. ಮುಂಡ್ರಮನೆ ಕುಟುಂಬಕ್ಕೆ ಸೇರಿದ ಭತ್ತದ ಫಸಲು ಸಂಪೂರ್ಣವಾಗಿ ನಾಶವಾಗಿದೆ. ಸ್ಥಳೀಯ ಬೆಳೆಗಾರ ಪ್ರದೀಪ್ ಎಂಬುವವರಿಗೆ ಸೇರಿದ ಕಾಫಿ ಫಸಲು ಕೊಚ್ಚಿ ಹೋಗಿದೆ. ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ, ಸಿದ್ದಾಪುರ, ನೆಲ್ಯಹುದಿಕೇರಿ ಸುತ್ತಮುತ್ತಲ ಭಾಗಗಳಲ್ಲಿನ ರೈತರು ಹಾಗೂ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದಾರೆ.
ನಾಪೋಕ್ಲು : ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯು ಅವಾಂತರವನ್ನು ಸೃಷ್ಟಿಸಿದೆ. ದಿಢೀರ್ ಬಂದ ಮಳೆಯಿಂದ ಒಣಗಲಿಕ್ಕೆ ಹಾಕಿದ್ದ ಕಾಫಿಯು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದು ಬೆಳೆಗಾರನಿಗೆ ಅಪಾರ ನಷ್ಟ ಉಂಟಾಗಿದೆ.