ಸೋಮವಾರಪೇಟೆ, ಜ. ೭: ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗದ ಸದಸ್ಯರಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಈರ್ವರು ಸದಸ್ಯರನ್ನು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸನ್ಮಾನಿಸಲಾಯಿತು.
ಬೇಳೂರು ಗ್ರಾ.ಪಂ.ಯ ಕೆ.ಪಿ. ಸುದರ್ಶನ್ ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿಯ ಸುಶೀಲ ಹಾನಗಲ್ಲು ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಜವರಪ್ಪ ಮಾತನಾಡಿ, ಜನರ ಸೇವೆ ಮಾಡಲು ತಮಗೆ ಮತದಾರರು ಅವಕಾಶ ನೀಡಿದ್ದು, ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ತಮ್ಮ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದ ಹಾಗೆ ನೋಡಿಕೊಳ್ಳಬೇಕೆಂದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ತಮ್ಮ ವಾರ್ಡಿನ ಜನರ ಸಮಸ್ಯೆಗಳ ನಿವಾರಣೆಗೆ ಮೊದಲ ಆದ್ಯತೆ ನೀಡಿ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ರಾಜಕೀಯ ರಹಿತವಾಗಿ ಜನಸೇವೆ ಮಾಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ನ.ಲ. ವಿಜಯ, ರಾಣಿ ರವೀಂದ್ರ, ಅಶ್ವಿನಿ ಕೃಷ್ಣಕಾಂತ್, ಕೆ.ವಿ. ಪುಟ್ಟಣ್ಣ ಆಚಾರ್ಯ, ಅನಿತಾ ಶುಭಾಕರ, ಶರ್ಮಿಳಾ ರಮೇಶ್, ರಾಚುಶ್ಯಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.