ಮಡಿಕೇರಿ, ಜ. ೭: ಜಿಲ್ಲೆ ಯಾದ್ಯಂತ ಅಕಾಲಿಕ ಮಳೆಯಾಗು ತ್ತಿರುವುದರಿಂದ ರೈತರು, ಬೆಳೆಗಾರರು ತೊಂದರೆ, ನಷ್ಟ ಅನುಭವಿಸು ವಂತಾಗಿದೆ. ಒಂದೆಡೆ ಭತ್ತದ ಬೆಳೆ ಕಟಾವು ಸಮಯವಾದರೆ, ಮತ್ತೊಂದೆಡೆ ರೋಬಸ್ಟಾ ಕಾಫಿ ಹಣ್ಣಾಗಿ ಕುಯ್ಲು ಮಾಡುವ ಸಮಯವಾಗಿದೆ.

ಆದರೆ ಕುಯ್ಲು ಮಾಡಿದ ಕಾಫಿ ಒಣಗಿಸಲಾಗದ ಸ್ಥಿತಿ ನಿರ್ಮಾಣ ವಾಗಿದೆ. ಇನ್ನು ಕಾಫಿ ಹಣ್ಣುಗಳ ಮಧ್ಯೆ ಹೂಗಳು ಅರಳುತ್ತಿವೆ. ಮಳೆಯ ಅವಾಂತರದಿAದಾಗಿ ನಷ್ಟ ಅನುಭವಿಸುವಂತಾಗಿದೆ.

ಸೋಮವಾರಪೇಟೆ : ಇದೀಗ ಬೀಳುತ್ತಿರುವ ಅಕಾಲಿಕ ಮಳೆ ಹಾಗೂ ಬದಲಾಗುತ್ತಿರುವ ಹವಾಮಾನ ದಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟದ ದಿನಗಳನ್ನು ಎದುರಿಸು ವಂತಾಗಿದೆ. ಗಿಡಗಳಲ್ಲಿ ಹಣ್ಣಾಗಿರುವ ಕಾಫಿಯನ್ನು ಕುಯ್ಲು ಮಾಡುವ ಬದಲು, ನೆಲದಲ್ಲಿ ಬಿದ್ದಿರುವ ಕಾಫಿಯನ್ನು ಹೆಕ್ಕುವ ಸ್ಥಿತಿ ಬಂದೊದಗಿದೆ.

ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ವ್ಯಾಪ್ತಿ ಯಲ್ಲಿ ಕಳೆದ ಮೂರು ದಿನಗಳಿಂದ ಅಕಾಲಿಕವಾಗಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿರುವ ದರಿಂದ ಕೊಯ್ಲಿಗೆ ಬಂದಿರುವ ಕಾಫಿ ಹಣ್ಣು ನೆಲಕ್ಕಚ್ಚುತ್ತಿದೆ. ಪರಿಣಾಮ ಈವರೆಗೂ ಗಿಡಗಳಿಂದ ಕುಯ್ಲು ಮಾಡುತ್ತಿದ್ದ ಕಾಫಿಯನ್ನು ಇದೀಗ ನೆಲದಿಂದ ಹೆಕ್ಕುವ ಕಾಯಕ ಬೆಳೆಗಾರರದ್ದಾಗಿದೆ.

ಶೀತಮಯ ವಾತಾವರಣದಿಂದ ಗಿಡಗಳಲ್ಲಿ ಕಾಫಿ ಹಣ್ಣಿನ ತೊಟ್ಟು ಕೊಳೆಯುತ್ತಿದ್ದು, ಫಸಲು ನೆಲಕ್ಕಚ್ಚುತ್ತಿದೆ. ಇಂತಹ ಕಾಫಿಯನ್ನು ಪಲ್ಪಿಂಗ್ ಮಾಡಿದದೂ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವದಿಲ್ಲ. ಗುಣಮಟ್ಟ ಕುಸಿದರೆ ಕಾಫಿಯ ಮೌಲ್ಯವೂ ಕುಸಿಯುತ್ತದೆ. ಒಟ್ಟಾರೆ ಅಕಾಲಿಕ ಮಳೆ ಸಿಡಿಲಾಘಾತವನ್ನು ನೀಡುತ್ತಿದೆ ಎಂದು ತೋಳೂರು ಶೆಟ್ಟಳ್ಳಿಯ ಕೃಷಿಕರಾದ ಕೆ.ಕೆ. ಸುಧಾಕರ್, ಎಸ್. ಪಿ. ಮಾಚಯ್ಯ ತಿಳಿಸಿದ್ದಾರೆ.

ಕಾಫಿ ಗಿಡಗಳಲ್ಲಿ ಹಣ್ಣು ಕುಯ್ಲಿಗೆ ಬಂದಿರುವ ಸಂದರ್ಭದಲ್ಲೇ ಮಳೆಯಾಗುತ್ತಿರುವದರಿಂದ ಅಕಾಲಿಕ ವಾಗಿ ಹೂ ಅರಳುವ ಸಂದರ್ಭ ಒದಗಿ ಬಂದಿದೆ. ಅಕಾಲಿಕ ಮಳೆ, ಹೆಚ್ಚಿನ ನೆರಳು, ಶೀತಮಯ ವಾತಾವರಣ ದಿಂದ ಹಣ್ಣಿರುವಾಗಲೇ ಗಿಡಗಳಲ್ಲಿ ಮೊಗ್ಗುಗಳು ಮೂಡುತ್ತಿವೆ. ಇದಕ್ಕೆ ಮಳೆಯ ಸಿಂಚನವಾದರೆ ಹೂವು ಅರಳಿ ಕಾಯಿಕಟ್ಟಲಾರಂಭಿಸುತ್ತವೆ.

ಇAತಹ ಕಾಯಿಗಳು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಹಣ್ಣಾಗುತ್ತವೆ. ಈ ಅವಧಿ ಮಳೆಗಾಲವಾದ್ದರಿಂದ ಹಣ್ಣನ್ನು ಕುಯ್ಲು ಮಾಡಿ, ಪಲ್ಪಿಂಗ್ ನಂತರ ಒಣಗಿಸಲು ಅಸಾಧ್ಯವಾಗುತ್ತದೆ. ಈಗಿನ ಮಳೆ ಅರೆಬಿಕಾ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೨೮,೫೪೦ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯುತ್ತಿದ್ದು, ಇದರಲ್ಲಿ ಬಹುಪಾಲು ಅರೇಬಿಕಾ ಕಾಫಿ ಇದೆ. ತಾಲೂಕಿನಲ್ಲಿ ೨೨,೯೪೦ ಹೆಕ್ಟೇರ್‌ನಲ್ಲಿ ಅರೇಬಿಕಾ, ೫,೬೦೦ಹೆ.ನಲ್ಲಿ ರೋಬಸ್ಟಾ ಬೆಳೆಯ ಲಾಗುತ್ತಿದೆ. ಬಹುಪಾಲು ಕೃಷಿಕರು ಮಳೆಯನ್ನೇ ಅವಲಂಬಿಸಿ ಕಾಫಿ ಕೃಷಿ ಕೈಗೊಂಡಿದ್ದು, ಅದೇ ಮಳೆ ಅಕಾಲಿಕವಾಗಿ ಸುರಿದು ಬೆಳೆಗಾರರ ನೆಮ್ಮದಿ ಕೆಡಿಸುತ್ತಿದೆ.

ತಾಲೂಕಿನ ಶಾಂತಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ, ಕುಶಾಲನಗರ, ಶನಿವಾರಸಂತೆ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಅಕಾಲಿಕ ಮಳೆಯಾಗಿದೆ. ಅಲ್ಲಲ್ಲಿ ಮಳೆ ಬೀಳುತ್ತಿರುವುದರಿಂದ ಪಲ್ಪಿಂಗ್ ಕಾಫಿ ಬೀಜವನ್ನು ಒಣಗಿಸಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಲ್ಲಿ ಕಾಫಿ ಬೀಜ ಒಣಗಿದರೆ ಮಾತ್ರ ಗುಣಮಟ್ಟ ವನ್ನು ಕಾಯ್ದುಕೊಳ್ಳಬಹುದು. ಕಾಫಿಯು ಗುಣಮಟ್ಟ ಕಳೆದುಕೊಂಡರೆ ಕೊಳ್ಳುವವರೂ ಇಲ್ಲದಂತಾಗುತ್ತಾರೆ. ಒಟ್ಟಾರೆ ಅಕಾಲಿಕ ಮಳೆ ಸಂಕಷ್ಟದ ದಿನಗಳನ್ನು ತಂದಿಟ್ಟಿದೆ.

ನಾಪೋಕ್ಲು : ಹೋಬಳಿ ವ್ಯಾಪ್ತಿಯಲ್ಲಿ ರೋಬಸ್ಟಾ ಕಾಫಿಯ ಕುಯ್ಲು ಬಿರುಸುಗೊಂಡಿದ್ದು ಕಾಫಿ ಒಣಗಿಸಲು ಬೆಳೆಗಾರರು ಪರದಾಡು ವಂತಾಗಿದೆ. ಡಿಸೆಂಬರ್ ತಿಂಗಳಲ್ಲಿ ಬಹುತೇಕ ದಿನಗಳು ಮೋಡ ಕವಿದ ವಾತಾವರಣ ಇತ್ತು. ಇದೀಗ ಜನವರಿ ತಿಂಗಳಲ್ಲೂ ಮಳೆ ಸುರಿಯುತ್ತಿದ್ದು ಕಾಫಿ ಬೆಳೆಗಾರರು ಕುಯ್ಲು ಕೆಲಸಕ್ಕೆ ಪರದಾಡುವಂತಾಗಿದೆ. ಸೋಮವಾರ ಸಂಜೆ ವಿವಿಧೆಡೆ ಮಳೆಯಾಗಿದೆ. ಸಮೀಪದ ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬೆಳೆಗಾರರು ಕುಯ್ಲು ಮಾಡಿದ ಕಾಫಿಯನ್ನು ಮಳೆಯಿಂದ ಸಂರಕ್ಷಿಸಲು ಪರದಾಡು ವಂತಾಯಿತು. ಒಂದು ವಾರದಿಂದ ಬಹುತೇಕ ಅವಧಿ ಮೋಡ ಕವಿದ ವಾತಾವರಣವಿತ್ತು. ನಾಪೋಕ್ಲು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಕಾಫಿ ಕೊಯ್ಲಿಗೆ ಕಾರ್ಮಿಕರನ್ನು ಹೊಂದಿಸಿ ಬೆಳೆಗಾರರು ಕುಯ್ಲು ಮಾಡಿದ ಕಾಫಿಯನ್ನು ಕಣಗಳಲ್ಲಿ ಮಾತ್ರವಲ್ಲದೆ ಗದ್ದೆಗಳಲ್ಲಿ ಶಾಲಾ ಮೈದಾನಗಳಲ್ಲಿ ಒಣಗಿಸಲು ಹಾಕುತ್ತಿದ್ದಾರೆ. ದಿಢೀರ್ ಮಳೆ ಬಂದಾಗ ಒಣಗಲು ಹಾಕಿದ ಕಾಫಿಯನ್ನು ಸಂರಕ್ಷಿಸುವುದು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಸಮೀಪದ ಕೊಟ್ಟಮುಡಿ, ಪಾಲೂರು, ಬೆಟ್ಟಗೇರಿ ಹೆರವನಾಡು, ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಕಾಫಿಯ ಗಿಡಗಳಲ್ಲಿ ಹೂಗಳು ಭಾಗಶಃ ಅರಳಿವೆ. ಇದರಿಂದ ಕಾಫಿ ಕುಯ್ಲಿಗೆ ತೊಂದರೆಯಾಗುತ್ತಿರುವುದಲ್ಲದೆ ಮುಂದಿನ ವರ್ಷದ ಇಳುವರಿ ಮೇಲೂ ಪರಿಣಾಮ ಬೀರಲಿದೆ. ಅವಧಿಗೆ ಮುನ್ನವೇ ಕಾಫಿಯ ಹೂಗಳು ಅರಳಿದ್ದು, ಬೆಳೆಗಾರರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೊದಲ ಹೂಮಳೆಯಾಗಲಿದ್ದು ಕಾಫಿ ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಹೆಚ್ಚಿನ ಬೆಳೆಗಾರರು ನೀರು ಹಾಯಿಸಿ ಹೂ ಅರಳಿಸಲು ಮುಂದಾಗುತ್ತಾರೆ. ವಾತಾವರಣದಲ್ಲಿನ ಏರುಪೇರು ಕುಯ್ಲಿನ ಅವಧಿಯಲ್ಲಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಕಾಫಿ ಒಣಗಿಸಲು ಉಂಟಾಗುವ ಸಮಸ್ಯೆ ಮಾತ್ರವಲ್ಲದೆ, ಮಾರಾಟದ ವೇಳೆಯಲ್ಲೂ ವ್ಯಾಪಾರಸ್ಥರು ಖರೀದಿಸುವಾಗ ಕಾಫಿ ಗುಣಮಟ್ಟ ನೋಡಿ ಬೆಲೆಯಲ್ಲಿ ಕಡಿತ ಮಾಡುತ್ತಾರೆ. ಎಲ್ಲಾ ರೀತಿಯಿಂದಲೂ ಬೆಳೆಗಾರರು ಪರಿತಪಿಸುವಂತಾಗಿದೆ ಎಂದು ಬೆಳೆಗಾರರ ಅಭಿಪ್ರಾಯವಾಗಿದೆ.

ಅಪಾರ ಪ್ರಮಾಣದ ಕಾಫಿ ಫಸಲು ಹಾನಿ

ಕಣಿವೆ : ಕಳೆದ ಎರಡು ದಿನಗಳಲ್ಲಿ ಸುರಿದ ಅಕಾಲಿಕ ಮಳೆ, ಕಾಫಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂದು ಬೆಳೆಗಾರರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಕಾಫಿ ಕುಯ್ಲು ಮುಗಿಯುವ ಮುನ್ನವೇ ಸುರಿದ ಮಳೆಯ ಪರಿಣಾಮ ಅರೇಬಿಕಾ ಗಿಡಗಳಲ್ಲಿ ಬಿಟ್ಟಿದ್ದ ಕಾಫಿ ಹಣ್ಣುಗಳು ನೆಲಕ್ಕುರುಳಿರುವುದು ಬೆಳೆಗಾರರಿಗೆ ನಷ್ಟ ಉಂಟು ಮಾಡಿದೆ ಎಂದು ಗುಡ್ಡೆಹೊಸೂರಿನ ಬೆಳೆಗಾರ ಚೆಂಗಚೆAಡ ಗಣೇಶ್ ಹಾಗೂ ಹಣಕೋಡಿನ ಬೆಳೆಗಾರ ದಯಾನಂದ ಹೇಳಿದ್ದಾರೆ.

ಕಾಫಿ ಕುಯ್ಲು ಮುಗಿವ ಮುನ್ನವೇ ಸುರಿದ ಮಳೆ ಯಾವ ಬೆಳೆಗಾರರಿಗೂ ಹಿತ ನೀಡಿಲ್ಲ. ಕೆಲವು ಕಡೆಗಳಲ್ಲಿ ಭತ್ತದ ಒಕ್ಕಲು ಮುಗಿಸಿ ಕಾಫಿ ಕುಯ್ಲುವಿನತ್ತ ದಾವಿಸುವುದೂ ಉಂಟು. ಇನ್ನೂ ಕೆಲವು ಕಡೆ ಮೊದಲ ಸುತ್ತಿನ ಕಾಫಿ ಕುಯ್ಲು ಮಾಡಿ ಭತ್ತದ ಒಕ್ಕಲಿಗೆ ಮುಂದಾಗುವ ಪರಿಪಾಟವಿದೆ. ಆದರೆ ಈಗ ಸುರಿದ ಈ ಅಕಾಲಿಕ ಮಳೆ ಭತ್ತ ಹಾಗೂ ಕಾಫಿ ಬೆಳೆಗಾರರಿಗೆ ಸಂತಸದ ಬದಲು ಸಂಕಟವನ್ನು ಉಂಟು ಮಾಡಿದೆ ಎಂಬದು ಬೆಳೆಗಾರರ ವಾದ.

ಉತ್ತಮವಾಗಿ ಸುರಿದ ಹದ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಒಂಭತ್ತರಿAದ ಹನ್ನೆರಡು ದಿನಗಳಲ್ಲಿ ಕಾಫಿ ಗಿಡದಲ್ಲಿ ಮೊಗ್ಗು ಕಟ್ಟುತ್ತದೆ. ಇದು ಮುಂದಿನ ಕಾಫಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಈಗ ನಾವು ಈ ಮಳೆಯ ನಡುವೆ ಕಾಫಿಯನ್ನು ಕುಯ್ಲು ಮಾಡೋದು ಹೇಗೆ ಎಂಬ ದಿಗಿಲು ಕಾಡಿದೆ.

ಈ ಅಕಾಲಿಕ ಮಳೆ ಮುಂದಿನ ಹಂಗಾಮಿಗೆ ಶುಂಠಿ ಬೇಸಾಯ ಕೈಗೊಳ್ಳ ಬಯಸುವ ಬೆಳೆಗಾರರು ಖುಷ್ಕಿ ಭೂಮಿಯನ್ನು ಉಳುಮೆ ಮಾಡಲು ಒಂದಷ್ಟು ಉಪಕಾರಿಯಾಗಿದೆ ಎಂದು ಹೇಳಬಹುದಷ್ಟೆ.

ನೆಲಕಚ್ಚಿದ ಕಾಫಿ ಹಣ್ಣು

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ರಾತ್ರಿ ೮ ಗಂಟೆಗೆ ಧಾರಾಕಾರವಾಗಿ ಆರಂಭವಾದ ಮಳೆ ಗುರುವಾರ ಬೆಳಗ್ಗಿನ ಜಾವದವರೆಗೂ ಜಿನುಗುತ್ತಲೆ ಇತ್ತು.

ಬಿಳಾಹ ಗ್ರಾಮಕ್ಕೆ ೭೫ ಸೆಂಟ್, ಮಣಗಲಿ ಗ್ರಾಮಕ್ಕೆ ೨.೬೦ ಇಂಚು, ಕಿತ್ತೂರು ಗ್ರಾಮಕ್ಕೆ ೩.೫೦ ಇಂಚು, ಮಾದೇಗೋಡು ಗ್ರಾಮಕ್ಕೆ ೧.೭೫ ಇಂಚು ಹಾಗೂ ಕೊಡ್ಲಿಪೇಟೆ ಹೋಬಳಿಯಲ್ಲೂ ಉತ್ತಮ ಮಳೆ ಯಾಗಿದ್ದು, ದೊಡ್ಡಕುಂದ ಗ್ರಾಮಕ್ಕೆ ೨.೫ ಇಂಚು ಮಳೆಯಾಗಿದೆ.

ಜನವರಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತೋಟಗಳಲ್ಲಿ ಕಾಫಿ ಹಣ್ಣು ಕುಯ್ಯುವ ಕಾಯಕ ಭರದಿಂದ ಸಾಗಿದೆ. ಕೆಲವರು ಪಲ್ಫರ್ ಮಾಡಿ ಒಣಗಿಸಲು ಹಾಕಿದ ಕಾಫಿ ಗುಂಡು, ಬೆಳೆ ಒದ್ದೆಯಾಗಿದ್ದು, ಕೊಚ್ಚಿಯೂ ಹೋಗಿದೆ. ತೋಟದಲ್ಲಿ ಗಿಡದಲ್ಲಿದ್ದ ಹಣ್ಣುಗಳು ಉದುರಿ ನೆಲಕಚ್ಚಿದೆ.

ಕೆಲವೆಡೆ ತೋಟದಲ್ಲಿ ರೋಬಸ್ಟಾ, ಅರೆಬಿಕಾ ಗಿಡಗಳಲ್ಲಿ ಕಾಫಿ ಹೂ ಅರಳುತ್ತಿದೆ. ಅಕಾಲಿಕ ಅರಳುವಿಕೆಯಿಂದ ಮುಂದಿನ ವರ್ಷ ಫಸಲಿಗೆ ಹೊಡೆತ. ಇಳುವರಿ ಕಡಿಮೆಯಾಗುತ್ತದೆ. ಹವಾಮಾನ ವೈಪರೀತ್ಯ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆ ಹಾನಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ದೊಡ್ಡಬಿಳಾಹ ಗ್ರಾಮದ ಬೆಳೆಗಾರ ಬಿ.ಎಸ್. ಮೋಹನ್ ಅಳಲು ತೋಡಿಕೊಂಡರು.

ಬೆಳೆ ನಷ್ಟ

ಕೂಡಿಗೆ : ಕಳೆದ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾಗಿ ಭಾರಿ ನಷ್ಟವಾಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುದುಗೂರು, ಮದಲಾಪುರ, ಕಣಿವೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು ವ್ಯಾಪ್ತಿಯಲ್ಲಿ ರಾಜಮುಡಿ ಸಣ್ಣಮಧು ಭತ್ತದ ಬೆಳೆ ಕುಯ್ಲಿಗೆ ಬಂದಿದ್ದು, ಮಳೆಯಿಂದಾಗಿ ಉದುರುತ್ತಿವೆ. ಅಲ್ಲದೆ ಭತ್ತದ ಹುಲ್ಲು ಸಹ ಹಾಳಾಗುತ್ತಿರುವುದರಿಂದ ಈ ಬಾರಿ ಹಸುಗಳಿಗೆ ಹುಲ್ಲಿನ ಸಮಸ್ಯೆಗಳು ಎದುರಾಗುತ್ತವೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.

-ಚಿತ್ರ ವರದಿ : ವಿಜಯ್ ಹಾನಗಲ್, ದುಗ್ಗಳ, ಮೂರ್ತಿ, ನಾಗರಾಜಶೆಟ್ಟಿ, ನರೇಶ್.