ಮಡಿಕೇರಿ, ಜ. ೭: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಕೊಡಗು ಹಾಗೂ ಹಾಸನ ಜಿಲ್ಲೆಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ೧೬ ಎಸ್‌ಡಿಪಿಐ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು.

ನಗರದ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಚುನಾಯಿತ ಪ್ರತಿನಿಧಿಗಳು ಮಾದರಿ ಪಂಚಾಯಿತಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಡವರ, ದುರ್ಬಲರ ಪರ ಕೆಲಸ ಮಾಡಬೇಕು. ಜನೋಪಯೋಗಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.

ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಮಾತನಾಡಿ, ಮಾದರಿ ಜನಪ್ರತಿನಿಧಿ ಯಾಗಿ ಎಸ್‌ಡಿಪಿಐ ಬೆಂಬಲಿತರು ಇರಬೇಕು. ಸಮಾಜಮುಖಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಸೇವಕರಿಗೆ ಅಭಿನಂದನೆ

ಕೋವಿಡ್ ಪರಿಸ್ಥಿತಿಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ ವಿವಿಧ ಸಂಘ-ಸAಸ್ಥೆಗಳ ಸ್ವಯಂ ಸೇವಕರನ್ನು ಪಕ್ಷದ ಕಚೇರಿಯಲ್ಲಿ ನಗರ ಸಮಿತಿ ಅಧ್ಯಕ್ಷ ಖಲೀಲ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಮಡಿಕೇರಿ ಯೂತ್ ಕಮಿಟಿ, ಮಾಧ್ಯಮ ಸ್ಪಂದನ ತಂಡ, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ, ಎನ್.ಡಬ್ಲ್ಯೂ.ಎಫ್. ಹಾಗೂ ಕೋವಿಡ್‌ನಿಂದಾಗಿ ಮೃತಪಟ್ಟವರ ಶವ ಸಂಸ್ಕಾರ ಮಾಡಿದ ಪಿ.ಎಫ್.ಐ. ಸದಸ್ಯರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ಮನ್ಸೂರ್ ಎಂ.ಎ., ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್, ನಗರ ಸಮಿತಿ ಉಪಾಧ್ಯಕ್ಷ ಮೈಕಲ್, ಕಾರ್ಯದರ್ಶಿ ಜಂಶೀರ್, ಸಹ ಕಾರ್ಯದರ್ಶಿ ಜಲೀಲ್, ಕೋಶಾಧಿಕಾರಿ ಮೂಸಾ, ಪಿ.ಎಫ್.ಐ. ಜಿಲ್ಲಾಧ್ಯಕ್ಷ ಶೌಕತ್ ಅಲಿ, ಮುಖಂಡರಾದ ಮುಸ್ತಫ ಸೇರಿದಂತೆ ಮತ್ತಿತರರು ಇದ್ದರು.