ಗೋಣಿಕೊಪ್ಪಲು, ಜ. ೭: ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪಾಲಿನ ಜವಾಬ್ದಾರಿಯನ್ನು ಚಾಚುತಪ್ಪದೆ ನಿಭಾಯಿಸುವ ಮೂಲಕ ಒಗ್ಗಟ್ಟು ಕಾಪಾಡಿದ್ದಾರೆ. ಇದು ಇಂದು ಫಲ ನೀಡಿದೆ ಎಂದು ಮಹಾಶಕ್ತಿ ಕೇಂದ್ರದ ಪ್ರಮುಖ ಮಚ್ಚಮಾಡ ಮುರಳಿ ಮುತ್ತಪ್ಪ ಹೇಳಿದರು.

ವೀರಾಜಪೇಟೆ ತಾಲೂಕಿನ ಗಡಿ ಭಾಗ ಕುಟ್ಟ ಪಂಚಾಯಿತಿಯು ಹಲವು ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸುವ ಮೂಲಕ ಅಧಿಕಾರ ಪಡೆದಿದೆ. ಅವಿರತ ಶ್ರಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆ ಎಂದರು. ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಕುಟ್ಟ ನಗರದಲ್ಲಿ ಮೆರವಣಿಗೆ ಸಾಗಿ, ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುರಳಿ ಮುಂದಿನ ದಿನದಲ್ಲಿ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿಗೆ ಆರಿಸಿ ಬಂದಿರುವ ಸದಸ್ಯರು ದುಡಿಯಲಿದ್ದಾರೆ ಎಂದರು. ಪಟ್ಟಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಉತ್ತಮ ಸರ್ಕಾರ ಇರುವುದನ್ನು ಮನಗಂಡು ಮತದಾರರು ಸ್ಪಷ್ಟ ಬಹುಮತ ನೀಡಿದ್ದಾರೆ. ಮತದಾರರು ಪಕ್ಷದ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದಂತೆ ಸದಸ್ಯರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಜನರ ಕಷ್ಟದಲ್ಲಿ ಭಾಗಿಯಾಗಬೇಕು ಎಂದರು.

ಚುನಾವಣಾ ಉಸ್ತುವಾರಿ ವಹಿಸಿದ್ದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಗಡಿಭಾಗ ಪಂಚಾಯಿತಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸಮಯವನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರಿಗೆ ಉತ್ತಮ ಅಭ್ಯರ್ಥಿಗಳನ್ನು ಪಂಚಾಯಿತಿಗೆ ಆರಿಸಿ ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಪಕ್ಷದ ಪ್ರಮುಖ ಕಾರ್ಯಕರ್ತರು ಹಗಲಿರುಳೆನ್ನದೆ ಮುಖಂಡರೊAದಿಗೆ ಜೊತೆಗೂಡಿ ದುಡಿದ ಫಲದಿಂದ ಇಂದು ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದರು. ಸಭೆಯನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ, ಜಿಲ್ಲಾ ಉಪಾಧ್ಯಕ್ಷೆ ತೀತಿರ ಊರ್ಮಿಳಾ, ತಾಲೂಕು ಕಾರ್ಯದರ್ಶಿ ಚೋಡುಮಾಡ ದಿನೇಶ್, ಶಕ್ತಿ ಕೇಂದ್ರದ ಪ್ರಮುಖ ಟಿ.ಪಿ. ರಾಜ, ಮುಂತಾದವರು ಮಾತ ನಾಡಿದರು. ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹೊಟ್ಟೆಂಗಡ ರಮೇಶ್, ತಾಲೂಕು ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಶಕ್ತಿ ಕೇಂದ್ರದ ಸಹಪ್ರಮುಖ್ ಕಾಕೆರ ದಿನೇಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಚೀರ ಕವಿತ, ಗೆಲುವು ಸಾಧಿಸಿದ ೯ ಮಂದಿ ನೂತನ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ವಿವಿಧ ಮುಖಂಡರು, ಕಾರ್ಯಕರ್ತರು ವಾದ್ಯಗೋಷ್ಠಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಸಾಗಿ ವಿಜಯೋತ್ಸವ ಆಚರಿಸಿದರು.