ಮಡಿಕೇರಿ, ಜ. ೫: ಬಾಳೆಲೆಯ ಪೋಡಮಾಡ ಉತ್ತಪ್ಪ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳು ಹಾಗೂ ಉತ್ತಪ್ಪ ಅವರ ಮರಣೋತ್ತರ ಪರೀಕ್ಷಾ ವರದಿಯನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿರುವ ದಲಿತ ಸಂಘರ್ಷ ಸಮಿತಿ, ಮುಂದಿನ ೧೫ ದಿನದೊಳಗೆ ನ್ಯಾಯ ದೊರೆಯ ದಿದ್ದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ನಗರದ ಪತ್ರಿಕಾ ಭವನದಲ್ಲಿ
(ಮೊದಲ ಪುಟದಿಂದ) ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಇವರುಗಳು, ದಿನಾಂಕ ೧೮.೧೧.೨೦೨೦ ರಂದು ಅಪರಾಹ್ನ ಅಂದಾಜು ೪ ಗಂಟೆಗೆ ಸಂತೋಷ್ ಮತ್ತು ಆತನ ಸ್ನೇಹಿತ ಕಾಮರಾಜು ಅವರಿಗೆ ಸೇರಿದ ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದರು. ಆ ಕಾರಿಗೆ ಮಚ್ಚಮಾಡ ಕಾಶಿ ಎಂಬವರು ಡಿಕ್ಕಿಪಡಿಸಿದ್ದು, ಆ ಬಗ್ಗೆ ಅವರನ್ನು ಕೇಳಿದಾಗ ಮಚ್ಚಮಾಡ ಕಾಶಿ ಅವರಿಗೂ ಕಾಮರಾಜು ಹಾಗೂ ಸಂತೋಷ್ಗೂ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಪೋಡಮಾಡ ಉತ್ತಪ್ಪ ಎಂಬವರು ಮಧ್ಯ ಪ್ರವೇಶಿಸಿ ಸಂತೋಷ್ ಹಾಗೂ ಕಾಮರಾಜ್ ಅವರಿಗೆ ಏಕಾಏಕಿ ಥಳಿಸಿದ್ದಾರೆ. ಅಲ್ಲದೆ ಜಾತಿನಿಂದನೆ ಮಾಡಿ ಅವಾಚ್ಯ ಪದಗಳಿಂದ ಬೈದಿದ್ದರು ಎಂದರು.
ಅAದಾಜು ೫೦ಕ್ಕಿಂತಲೂ ಹೆಚ್ಚು ಜನರು ಈ ಘಟನೆಯಲ್ಲಿ ಸೇರಿದ್ದು, ಬಾಳೆಲೆಯ ಸಿಆರ್ಸಿ ಬ್ಯಾಂಕ್ನ ಕಟ್ಟಡದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಘಟನೆಯು ಪೂರ್ತಿಯಾಗಿ ದಾಖಲಾಗಿದೆ. ಆದರೆ ಇದರ ಬಗ್ಗೆ ಪೊಲೀಸ್ ಪುಕಾರು ನೀಡಿದಲ್ಲಿ ನೀವು ಮತ್ತು ನಿಮ್ಮ ಸಂಸಾರ ಬಾಳೆಲೆಯಲ್ಲಿ ಹೇಗೆ ಬದುಕುತ್ತೀರಾ ಎಂದು ಕೊಲೆ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಜೀವ ಭಯದಿಂದ ಸಂತೋಷ್ ಹಾಗೂ ಕಾಮರಾಜು ಮತ್ತು ಪ್ರತಾಪ್ ನಾಪತ್ತೆಯಾಗಿದ್ದಾರೆ.
ನಂತರ ದಿನಾಂಕ ೨೩.೧೧.೨೦೨೦ ರಂದು ಇದರ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಪುಕಾರು ನೀಡಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳು ಯುವಕರಿಗೆ ಬೆದರಿಕೆ ಒಡ್ಡಿದ್ದರಿಂದ ಅವರುಗಳು ಪೊಲೀಸ್ ಠಾಣೆಗೆ ಪುಕಾರು ನೀಡಲು ತಡವಾಯಿತು. ಯುವಕರು ಪುಕಾರು ನೀಡಿದ ತಕ್ಷಣ ಸಂತೋಷ್, ಕಾಮರಾಜು ಹಾಗೂ ಪ್ರತಾಪ್ ಎಂಬವರುಗಳ ವಿರುದ್ಧ ಸುಳ್ಳು ಪುಕಾರು ನೀಡಲಾಗಿದೆ ಎಂದು ಗೋಷ್ಠಿಯಲ್ಲಿ ಆರೋಪಿಸಿದರು.
ಕೆಲವು ದಿನಗಳ ನಂತರ ಪೋಡಮಾಡ ಉತ್ತಪ್ಪ ಅವರು ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿ ಸುಮಾರು ೨೦ ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವಿವರಿಸಿದರು. ಆದರೆ, ಉತ್ತಪ್ಪ ಅವರು ಮರಣ ಹೊಂದಿರುವುದು ಸಂತೋಷ್, ಕಾಮರಾಜು ಮತ್ತು ಪ್ರತಾಪ್ ಮಾಡಿರುವ ಹಲ್ಲೆಯಿಂದ ಎಂದು ಸುಳ್ಳು ಪುಕಾರು ನೀಡಿ ಅವರುಗಳ ಮೇಲೆ ಕೊಲೆ ಮೊಕದ್ದಮೆ ದಾಖಲಿ ಸಲಾಗಿದೆ ಎಂದು ಆಪಾದಿಸಿದರು.
ಈ ಮೂವರು ಜೀವ ಭಯದಿಂದ ತಲೆಮರೆಸಿಕೊಂಡಿದ್ದಾರೆ. ಬಾಳೆಲೆಯಲ್ಲಿ ಸಂತೋಷ್ ಮತ್ತು ಇತರರ ಪ್ರಾಣಕ್ಕೆ ಅಪಾಯ ಉಂಟು ಮಾಡುವ ಭಯವಿದೆ. ಮಾತ್ರವಲ್ಲದೆ ಪರಿಶಿಷ್ಟ ಜಾತಿಯವರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ವ್ಯಾಪಾರ ಮಾಡಲು ತಡೆಯೊಡ್ಡಲಾಗುತ್ತಿದೆ ಎಂದು ವಿಷಾದಿಸಿದರು.
ಕೂಡಲೇ ಈ ಘಟನೆ ಸಂಬAಧ ದಾಖಲಾಗಿರುವ ಸಿಸಿಟಿವಿ ದೃಶ್ಯಗಳು ಮತ್ತು ಪೋಡಮಾಡ ಉತ್ತಪ್ಪ ಅವರ ಮರಣೋತ್ತರ ಪರೀಕ್ಷಾ ವರದಿಯನ್ನು ತರಿಸಿಕೊಂಡು ಅವರ ಸಾವಿಗೆ ಕಾರಣವೇನೆಂದು ಪರಿಶೀಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಗಣೇಶ್ ಹೆಚ್.ಕೆ., ತಾಲೂಕು ಸಂಚಾಲಕ ಎ.ಪಿ. ದೀಪಕ್, ಸಂತ್ರಸ್ತರಾದ ಸರೋಜ, ಜಯಲಕ್ಷಿö್ಮ ಇದ್ದರು.