ಕುಶಾಲನಗರ, ಜ. ೬: ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ದಲ್ಲಿ ೨೬ನೇ ವರ್ಷದ ಪಂಪಾ ಬೆಳಕು ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿ ಯಿಂದ ನೆರವೇರಿತು.

ದಿ.ನಾಗರಾಜ್ ಗುರುಸ್ವಾಮಿ ತಂಡದ ಆಶ್ರಯದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಕಲಾತ್ಮಕ ರಂಗೋಲಿಯ ಚಿತ್ತಾರ, ಭಕ್ತಾದಿಗಳು ಬೆಳಗಿಸಿದ ಮಣ್ಣಿನ ಹಣತೆಗಳು ಪೂಜೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಸಂಜೆ ದೇವಾಲಯದಲ್ಲಿ ಪಡಿಪೂಜೆ, ಸಾಂಪ್ರದಾಯಿಕ ವಿಧಿಗಳ ನಂತರ ಸಮೀಪದ ಕಾವೇರಿ ನದಿಯಲ್ಲಿ ಅಯ್ಯಪ್ಪಸ್ವಾಮಿ ಪ್ರತಿಮೆಗೆ ತೀರ್ಥಸ್ನಾನ ನಂತರ ಪಂಪಾದೀಪ ವನ್ನು ನದಿಯಲ್ಲಿ ತೇಲಿಬಿಡಲಾಯಿತು.

ಈ ಸಂದರ್ಭ ಮಾತನಾಡಿದ ತಂಡದ ಪ್ರಮುಖರಾದ ವಿ.ಎಸ್. ಆನಂದಕುಮಾರ್, ಕಳೆದ ಮೂರು ದಶಕಗಳಿಂದ ಪಂಪಾ ದೀಪೋತ್ಸವ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಿಧಿಗಳನ್ನು ಸರಳವಾಗಿ ಆಚರಿಸ ಲಾಗಿದೆ ಎಂದು ತಿಳಿಸಿದರು.

ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿಭಟ್, ವಿಷ್ಣುಭಟ್, ಸೋಮಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಪ್ರಮುಖರಾದ ಕೆ.ಆರ್. ಶಿವಾನಂದ, ಡಿ. ಆರ್. ಸೋಮಶೇಖರ್, ಮಣಿ, ತಂಡದ ಸದಸ್ಯರಾದ ಚಂದ್ರು, ರಾಜೇಶ್, ರಾಕಿ, ನರೇಂದ್ರ, ದಿಲೀಪ್ ಸೇರಿದಂತೆ ಬಳಗದ ಸದಸ್ಯರು ಇದ್ದರು.