ಮೈಸೂರು, ಜ. ೬: ಕೊಡಗಿನ ಜನತೆಯ ಬಹು ವರ್ಷಗಳ ಕನಸಾದ ರೈಲ್ವೆ ಸಂಪರ್ಕ ಕಲ್ಪಿಸಲು ಕೊನೆಗೂ ಕಾಲ ಕೂಡಿ ಬಂದಿದೆ. ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಅಂತಿಮವಾಗಿ ಸ್ಥಳ ವೀಕ್ಷಣೆ ಮಾಡಿ ವರದಿ ನೀಡುವಂತೆ ಮೈಸೂರು ರೈಲ್ವೆ ಅಧಿಕಾರಿಗಳಿಗೆ ದೆಹಲಿಯ ಭಾರತೀಯ ರೈಲ್ವೆಯು ಮಂಗಳವಾರ ಸೂಚನೆ ನೀಡಿದೆ.ಈ ಉದ್ದೇಶಿತ ಮೈಸೂರು ಹಾಗೂ ಕುಶಾಲನಗರ ನಡುವಿನ ೮೭ ಕಿ.ಮೀ ಉದ್ದದ ರೈಲು ಮಾರ್ಗಕ್ಕೆ ೧೮೫೪.೬೨ ಕೋಟಿ ರೂಪಾಯಿ ವೆಚ್ಚ ಆಗಲಿರುವುದಾಗಿ ರೈಲ್ವೆ ಇಲಾಖೆ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಿದೆ. ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಳೆದ ಫೆಬ್ರವರಿ ೨೭, ೨೦೧೯ ರಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ನಂತರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೇ ಅಧಿಕಾರಿಗಳು ಪ್ರಾಥಮಿಕ ಇಂಜಿನಿಯರಿAಗ್ ಹಾಗೂ ಸಂಚಾರ (ಪಿಇಟಿ) ಸರ್ವೆಯನ್ನೂ ನಡೆಸಿದರು. ನಂತರ ಈ ಯೋಜನೆಯು ವ್ಯಾವಹಾರಿಕವಾಗಿ ಲಾಭದಾಯಕವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರಿಂದ ಯೋಜನೆಯೇ ನೆನೆಗುದಿಗೆ ಬಿದ್ದಿತ್ತು. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೂ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಪ್ರಯತ್ನ ನಡೆಸಿದ್ದರು. ಇದೀಗ ಎರಡು ನಗರಗಳ ನಡುವಿನ ರೈಲು ಸಂಚಾರ ಆರಂಭಕ್ಕೆ ಕೊನೆಯ ಹಂತದ ಸರ್ವೆ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಈ ಕುರಿತು ಮಾತನಾಡಿದ ಮೈಸೂರಿನ ರೈಲ್ವೇ ವಿಭಾಗೀಯ ಮ್ಯಾನೇಜರ್ ಸತ್ಯನಾರಾಯಣ ಅವರು ಅಂತಿಮ ಸರ್ವೆ ನಡೆಸಲು ರೈಲ್ವೇ ಮಂಡಳಿ ಆದೇಶ ನೀಡಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಬಿಡ್ಡುದಾರರು ಟೆಂಡರ್ ಸಲ್ಲಿಸಿದ್ದು ಬಿಡ್ದಾರರನ್ನು ಅಂತಿಮಗೊಳಿಸಿಲ್ಲ. ಅಂತಿಮ ಸರ್ವೆ ಮಾಡುವ ಪ್ರಕ್ರಿಯೆ ಮುಂದಿನ ೬ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ನಂತರ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸ ಲಾಗುವುದು. (ಮೊದಲ ಪುಟದಿಂದ) ರೈಲ್ವೇ ಮಂಡಳಿಯು ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಮತ್ತೋರ್ವ ಪ್ರಮುಖ ಅಧಿಕಾರಿಯಿಂದ ದೊರೆತ ಮಾಹಿತಿಯನ್ವಯ ಅಂತಿಮ ಸ್ಥಳ ಗುರುತು ಸರ್ವೆ(ಎಫ್ಎಸ್ಎಲ್) ಅನ್ವಯ ಈ ರೈಲು ಮಾರ್ಗದಲ್ಲಿ ಎಲ್ಲೆಲ್ಲಿ ಸೇತುವೆ ಬರಬೇಕು, ಕ್ರಾಸ್ ಮಾರ್ಗಗಳನ್ನು ಗುರುತಿಸುವದನ್ನು ನಿಖರವಾಗಿ ನಕ್ಷೆ ಮಾಡಬೇಕಾಗುತ್ತದೆ. ಅಲ್ಲದೆ, ಈ ಸರ್ವೆ ಸಂದರ್ಭವೇ ಯಾವ್ಯಾವ ಕಡೆ ಭೂಸ್ವಾಧೀನ ನಡೆಸಬೇಕೋ ಆ ಕೆಲಸಗಳನ್ನು ನಿರ್ವಹಿಸಲಾಗುತ್ತದೆ. ಬಳಿಕ ರಾಜ್ಯ ಸರಕಾರದಿಂದ ಭೂಮಿ ನೀಡುವಿಕೆ ಹಾಗೂ ಜೊತೆಗೆ ಒಟ್ಟು ಯೋಜನಾ ವೆಚ್ಚದಲ್ಲಿ ಕೇಂದ್ರ ಸರಕಾರ ಭರಿಸುವ ವೆಚ್ಚಕ್ಕೆ ಸಮಾನವಾಗಿ ಶೇ. ೫೦ ರಷ್ಟು ವೆಚ್ಚವನ್ನು ಭರಿಸುವ ಕುರಿತು ಒಪ್ಪಂದಗಳು ಏರ್ಪಟ್ಟು ರೈಲು ಮಾರ್ಗದ ಕಾಮಗಾರಿ ಆರಂಭಗೊಳ್ಳಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಹೊಂದಾಣಿಕೆಯಿAದ ಈ ಕಾರ್ಯ ನಡೆಯಬೇಕಾಗುತ್ತದೆ.
ಮೈಸೂರಿನಲ್ಲಿ ಈಗಾಗಲೇ ಅನೇಕ ನಗರಗಳಿಗೆ ವಿಮಾನ ಸಂಚಾರ ಆರಂಭಿಸಿದ್ದು ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಸೋಮವಾರದಿಂದ ನಾಲ್ಕು ಪ್ಯಾಸೆಂಜರ್ ರೈಲುಗಳನ್ನೂ ಬೆಂಗಳೂರಿಗೆ ಆರಂಭಿಸಲಾಗಿದ್ದು ಇದಕ್ಕೆ ರಿಸರ್ವೇಷನ್ ಇಲ್ಲ. ಕೊಡಗು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ರೈಲ್ವೇ ಸಂಪರ್ಕ ಸಾಧ್ಯವಾದರೆ ಉತ್ತರ ಭಾರತದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅಲ್ಲದೆ ಕೊಡಗಿನಿಂದ ಬೆಂಗಳೂರಿಗೆ ತೆರಳುವ ಹೆದ್ದಾರಿಯಲ್ಲಿ ನಿತ್ಯ ಕನಿಷ್ಟ ಪಕ್ಷ ನೂರು ಬಸ್ ಹಾಗೂ ಇತರ ವಾಹನಗಳ ಓಡಾಟ ಕಡಿಮೆ ಆಗಲಿದೆ ಎನ್ನಲಾಗಿದೆ. ಅಲ್ಲದೆ ಕಾಫಿ ರಫ್ತುದಾರರಿಗೂ ಸಾಗಣೆ ವೆಚ್ಚ ಗಣನೀಯವಾಗಿ ಉಳಿತಾಯ ಆಗಲಿದೆ. ರಾಜ್ಯದಲ್ಲಿ ಕೊಡಗು ಮಾತ್ರ ರೈಲ್ವೇ ಸಂಪರ್ಕ ವಂಚಿತ ಜಿಲ್ಲೆಯಾಗಿದೆ.