ಅಮೃತದ ಬಿಂದು!
“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲ ಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೂ ಪ್ರವಾಸ ಹೋಗುವುದು ವ್ಯರ್ಥ.”
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್
ಹೌದು ತೇಜಸ್ವಿಯವರ ಈ ಮಾತು ಅಕ್ಷರಶಃ ಸತ್ಯ. ನಾವೂ ವಾಸಿಸುತ್ತಿರುವ ಅಚ್ಚ ಮಲೆನಾಡು, ಪಶ್ಚಿಮಘಟ್ಟದ ಈ ಸಾಲು ಅಚ್ಚರಿಗಳ ಅಕ್ಷಯಪಾತ್ರೆಯಂತೆ. ಕೊಡಗಿನ ಪ್ರತಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಕ್ಕೂ ಒಂದು ಲಯವಿದೆ, ಅದರೊಂದಿಗೆ ಇಲ್ಲಿನವರ ಬದುಕು ಹದವಾಗಿ ಬೆರೆತಿದೆ.
ಮಲೆನಾಡು ಹಾಗೂ ಮಳೆನಾಡು ಅಂದರೆ ಹಾಗೆಯೇ ಅದೊಂದು ಕೌತುಕಗಳ ಜಗತ್ತು. ಇಲ್ಲಿನ ಮಳೆ, ಚಳಿ, ಗಾಳಿ ಎಲ್ಲದಕ್ಕೂ ಒಂದು ಸೌಂದರ್ಯವಿದೆ. ಅಗಾಧ ಸೌಂದರ್ಯದ ಹಿಂದೆ ಒಂದು ಕೌರ್ಯವೂ ಇದೆ. ಸೌಂದರ್ಯ ಮತ್ತು ಮೃಗೀಯತೆ ಎರಡನ್ನೂ ಪಕ್ಕಕ್ಕಿಟ್ಟು ಋತುಮಾನಗಳಲ್ಲಾಗುವ ಬದಲಾವಣೆಗಳನ್ನು ಬೆರಗು ಕಣ್ಣುಗಳಿಂದ ನೋಡುತ್ತಾ ಹೋದರೆ ನಾವೆಲ್ಲರೂ ಈ ಪ್ರಕೃತಿಯ ಅಗಾಧತೆಯ ಮುಂದೆ ಮಂಡಿಯೂರಿ ಶರಣೋ ಶರಣು ಎನ್ನದಿರಲು ಸಾಧ್ಯವೇ ಇಲ್ಲ. ಮನುಷ್ಯರು ಮಾತ್ರವೇ ಈ ಪ್ರಕೃತಿಗೆ ತಲೆಬಾಗುವುದಲ್ಲ. ಪ್ರಕೃತಿಯ ಪ್ರತಿಯೊಂದು ಚರಾಚರ ವಸ್ತು, ಜೀವಿ ಎಲ್ಲವೂ ಪ್ರಕೃತಿಯ ವೈಭವವನ್ನು ಸವಿದರೆ ಅದಕ್ಕೆ ತಲೆಬಾಗುವವರೇ.
ಬೆಳ್ಳಂಬೆಳಿಗ್ಗೆ ಬಾಗಿಲು ತೆರೆದರೆ ಮನೆಯ ಮುಂದಿರುವ ಎಲ್ಲ ಹೂ-ಗಿಡಗಂಟಿಗಳ ಮೇಲೆ ಮಿಂಚುವ ಮಂಜಿನ ಹನಿಗಳು, ನೆಲದ ಮೇಲೆ ಕಾಲಿಟ್ಟರೆ ಕಾಲನ್ನು ಚುಂಬಿಸುವ ಇಬ್ಬನಿ, ಎಳೆ ಬಿಸಿಲು ಬಂದರAತೂ ಹೂವುಗಳ ಮೇಲೆ ಸವಾರಿ ಮಾಡುತ್ತಿರುವ ಮಂಜಿನ ಹನಿಗಳ ನಾಟ್ಯ ಶುರುವಿಟ್ಟುಕೊಂಡು ಬಿಡುತ್ತದೆ. ಮಿಂಚುತ್ತಾ, ಬಳುಕುತ್ತಾ ಹೂವುಗಳನ್ನು ಮತ್ತಷ್ಟು ನಾಚುವಂತೆ ಮಾಡುವ ಈ ಹನಿಗಳು ಹೂವುಗಳ ಸೌಂದರ್ಯವನ್ನು ನೋಡುಗನ ಕಣ್ಣಿಗೆ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಪರಿಸರದಲ್ಲಾಗುವ ಈ ಮಂಜು-ಬಿಸಿಲಿನ ಹೊಳಪಿನ ಆಟವನ್ನು ನೋಡದೇ ಇರುವರು ಯಾರೂ ಇರಲಾರರು.
ಕೆಸ, ಗರಿಕೆ, ತಾವರೆ ಎಲೆಗಳ ಮೇಲೆ ಇವುಗಳಾಡುವ ಲಾಸ್ಯ ಹೇಳತೀರದು. ಅವುಗಳ ಮೇಲೆ ಇವುಗಳ ಸವಾರಿ ಮುತ್ತಿನ ಹನಿಗಳು ಮೆರವಣಿಗೆ ಹೊರಟಂತೆ ತೋರುತ್ತವೆ. ಎಲೆ, ಹಾಗೂ ಗರಿಕೆಗಳ ತುದಿಯಲ್ಲಿ ಅತ್ತ-ಇತ್ತ ಸರಿದಾಡುತ್ತಾ ವಜ್ರದ ಹರಳುಗಳಂತೆ ಇವುಗಳು ಸರಿದಾಡುವಾಗ ನೋಡುಗರ ಮನಸು ಕೂಡಾ ಹಾಗೇ ಜಾರಲಾರಂಭಿಸುತ್ತದೆ. ಎಲೆಗೆ ಕಚಗುಳಿಯಿಡುತ್ತಾ, ರಾತ್ರಿಯಿಡಿ ಸುರಿದ ಇಬ್ಬನಿ, ಅದರಲ್ಲಿ ಮುಳುಗೇಳುವ ಹೂವುಗಳು. ಎಲೆ ಮತ್ತು ಹೂವುಗಳು ಜೊತೆಗೆ ಮಂಜಿನ ಹನಿ, ಸೂರ್ಯರಶ್ಮಿಯ ಜೊತೆಗೆ ನಡೆಯುವ ಈ ಮಂಜಿನ ಹನಿಗಳ ಆಟ ಸೂರ್ಯ ಬರುವಷ್ಟು ಹೊತ್ತು ನಡೆದೇ ತೀರುತ್ತದೆ. ಈ ಹನಿಗಳ ಆಟ ನೋಡುತ್ತಾ ಮೈಮರೆತು ಕುಳಿತು ಬಿಡುವ ಸೂರ್ಯ, ಭೂಮಿಗೆ ಸೋಕಿದಾಕ್ಷಣ ಅವನಿಗೂ ಈ ಮಂಜಿನಾಟ ಹೊಟ್ಟೆಕಿಚ್ಚು ಬರಿಸುತ್ತದೆಯೇನೋ? ತಾನು ಬಂದ ಅರೆಕ್ಷಣದಲ್ಲಿ ಹನಿಗಳನ್ನು ಇನ್ನಿಲ್ಲದಂತೆ ಮಾಡಿಬಿಡುವುದರಲ್ಲಿ ಯಶಸ್ಸು ಕಾಣುತ್ತಾನೆ.
ಚಿಕ್ಕವರಿದ್ದಾಗ ಈ ಮಂಜಿನ ಹನಿಗಳನ್ನು ಬೀಳಿಸುವುದೆಂದರೆ ನಮಗೂ ಅಚ್ಚುಮೆಚ್ಚು. ತೋಟದಲ್ಲಿರುವ ಸಣ್ಣ ಮರದ ಕೆಳಗೆ ಹೋಗಿ ಅದರ ರೆಂಬೆಗಳನ್ನು ಹಿಡಿದು ಜೋರಾಗಿ ಅಲುಗಾಡಿಸುವುದು ಆಗ ಪಟಪಟನೆ ತಣ್ಣಗೆ ಕೊರೆಯುವ ಮಂಜಿನ ಹನಿಗಳು ಮೈಮೇಲೆ ಬಿದ್ದಾಗ ಆಗುತ್ತಿದ್ದ ಅನುಭವ ಮರೆಯಲಾಗದ್ದು.
ನಡೆದು ಹೋಗುವಾಗ ಮರದ ರೆಂಬೆ ಕೆನ್ನೆ ಸವರಿ ನಮಗೆ ಗೊತ್ತಿಲ್ಲದೇ ಕಳ್ಳ ಮಂಜುಹನಿಯೊAದು ನಮ್ಮ ಕೆನ್ನೆಗೆ ಮುತ್ತಿಟ್ಟಾಗ ಜೀವನ ಪಾವನ.
ನೀವು ಜಗತ್ತಿನ ಯಾವುದೇ ಊರಿಗೆ ಹೋಗಿ ಊರಿಗಿಂತ, ಅಲ್ಲಿನ ಸೌಂದರ್ಯಕ್ಕಿAಥ, ತಿಂದ ಊಟಕ್ಕಿಂಥ ಹೆಚ್ಚು ನಿಮ್ಮ ಮನಸಿನಲ್ಲಿ ಉಳಿಯುವುದು ನೀವು ಭೇಟಿಕೊಟ್ಟಾಗ ಆ ಊರಿನಲ್ಲಿದ್ದ ಋತುಮಾನ, ಸುಡುವ ಹಗಲು, ಕೊರೆವ ಚಳಿ, ಸುರಿವ ಮಳೆ. ಹಾಗೇ ಕೊಡಗಿಗೆ ಬಂದವರಿಗೆ ಎಲ್ಲ ಋತುಮಾನಗಳು ಹಿತವೆನಿಸಬಹುದು. ಅದರಲ್ಲೂ ಚಳಿಗಾಲ ತುಸು ಹೆಚ್ಚೇ ಇಷ್ಟವಾಗಬಹುದು. ಜಿ.ಪಿ. ರಾಜರತ್ನಂ ಹೇಳಿದ ಹಾಗೇ ‘ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರಿಲಿ ಮಂಜು!.’
ಚಳಿಗಾಲದ ಸಮಯದಲ್ಲಿ ಬೆಳಿಗ್ಗೆ ಸಹಸ್ರ ಶಿಖರಗಳ ನಾಡು ಎಂದು ಹೆಸರಾದ ಕೊಡಗಿನ ಗಿರಿ, ಶಿಖರಗಳು ಹಾಲುಗಡಲಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿರುತ್ತವೆ. ರಸ್ತೆಗಳು ಅಕ್ಷರಶಃ ರಾಜರತ್ನಂ ಹೇಳಿದ ಹಾಗೇ ಬೆಳ್ಳಿ ಬಳಿದ ಹಾಗೇ ಕಾಣುತ್ತಿರುತ್ತವೆ. ಹೂಗಿಡಗಳು, ಎಲೆಮರಗಳು, ಬಳ್ಳಿ-ಬೆತ್ತಗಳು ಮಂಜಿನ ಹನಿಗಳನ್ನು ತೊಟ್ಟು ಸಂಭ್ರಮಿಸುತ್ತಿರುತ್ತವೆ, ನೊರೆಹಾಲು ಹಾಕಿ ಮಾಡಿದ ನೊರೆಯುಕ್ಕುವ ಕೊಡಗಿನ ಕಾಫಿ, ಹಾಲಿಲ್ಲದ ಕಡುಕಪ್ಪು ಕಾಫಿ ನಾಲಿಗೆ ಸೇರಿದಂತೆ ದೇಹದ ನರನಾಡಿಗಳಿಗೂ ಚೈತನ್ಯ ತುಂಬುತ್ತಿರುತ್ತವೆ, ಹೊಳೆಸಾಲು, ಕೆರೆದಂಡೆಗಳು ಕೊರೆವ ನೀರು ತುಂಬಿಕೊAಡು ಸೀಗರೇಟಿನ ಹೊಗೆಯಂತೆ ಸುರುಳಿಸುರುಳಿಯಾಕಾರದ ಹೊಗೆ ಬಿಡುತ್ತಿರುತ್ತವೆ.
ಗಿಡಮರಗಳು ಕೆಲವು ಎಲೆ ಉದುರಿಸಿಕೊಂಡು ಬೋಳು ಸುಂದರಿಯAತೆ ನಿಂತಿದ್ದರೇ ತೋಟದ ಕಾಫಿ ಹಣ್ಣುಗಳು ಮಂಜಿನಲ್ಲಿ ತೋಯ್ದು, ಬಿಸಿಲಿನಲ್ಲಿ ಹಣ್ಣಾಗಿ ಒಣಗುವ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಗದ್ದೆಗಳಲಿ ಹೊಂಬಣ್ಣಕ್ಕೆ ತಿರುಗಿದ ಭತ್ತದ ತೆನೆಗೆಳು ಕಟಾವಿಗೆ ತಯಾರಾಗಿರುತ್ತವೆ. ಹಿರಿತಲೆಗಳು ಅಂಗಿ ಮೇಲಂಗಿ ಹಾಕಿಕೊಂಡು ಮೈಮನಗಳನ್ನು ಬೆಚ್ಚಗಿರಿಸಿಕೊಳ್ಳುವ ಧಾವಂತದಲ್ಲಿದ್ದರೆ, ಉತ್ತರ ಕೊಡಗು ಜಾನುವಾರು, ದೇವದೇವಿಯರ ಜಾತ್ರೆಗೆ ಸಜ್ಜಾಗುತ್ತಿರುತ್ತದೆ, ದಕ್ಷಿಣ ಕೊಡಗು ಊರ ಉತ್ಸವ, ಗ್ರಾಮದೇವಿಯ ಹಬ್ಬದ ಸಡಗರದಲ್ಲಿ ಮೊಳಗಿರುತ್ತದೆ.
ಅಲ್ಲೆಲ್ಲೋ ದೂರದಲ್ಲಿ ಮುತ್ತಪ್ಪ ದೇವರ ಚಂಡೆಯ ಸದ್ದು, ಬೆಟ್ಟದ ಈಶ್ವರ ದೇವಾಲಯದಲ್ಲಿ ವರ್ಷದ ಉತ್ಸವಕ್ಕೆ ಸಿದ್ಧತೆ, ಮದುವೆ, ಶಾಸ್ತçಗಳು ವಾದ್ಯದ ಸದ್ದು ಮಲೆಗಳ ನಡುವೆ ಕೇಳಿಬರುತ್ತಿರುತ್ತದೆ. ಈ ಸಮಯದಲ್ಲಿ ಕೊಡಗಿಗೆ ಬಂದರೆ ಕೊರೆವ ಚಳಿಯ ಜೊತೆಗೆ ಮರೆಯದ ನೆನಪುಗಳು ಖಂಡಿತ ಸಿಗುತ್ತವೆ. ಮಾಘ, ಫಲ್ಗುಣ, ಶಿಶಿರ ಮಬ್ಬುಮಬ್ಬಾದ ಕೊಡಗು, ಮುಸುಕಿದ ಮಂಜು, ಕವಿದ ಮೋಡ, ಸೊಯ್ಯನೆ ಬೀಸುವ ಗಾಳಿ ಆಹಾ ಕೊಡಗಿನ ಚಳಿಗಾಲದ ಋತು ವೈಭವಕ್ಕೆ ಸಾಟಿಯುಂಟೇ?
- ಉಷಾ ಪ್ರೀತಮ್, ಹವ್ಯಾಸಿ ಬರಹಗಾರ್ತಿ, ಮಗ್ಗುಲ