ಮಡಿಕೇರಿ, ಜ. ೩: ಮಡಿಕೇರಿಯ ಕೊಡಗು ಸೌಹಾರ್ದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಇಂದು ಕರ್ನಾಟಕ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಕೊಡವ ಸಮಾಜದಲ್ಲಿರುವ ಸಂಸ್ಥೆಯ ನವೀಕೃತ ಕಚೇರಿಯನ್ನು ಮಾಜಿ ಸಚಿವ ಯಂ.ಸಿ. ನಾಣಯ್ಯ ಹಾಗೂ ನೂತನ ಕೌಂಟರ್ ಅನ್ನು ಕೊಡುಗೆಯಾಗಿ ನೀಡಿರುವ ಹಿರಿಯ ಸದಸ್ಯ ಬೈರೇಟಿರ ಬಿದ್ದಯ್ಯ ಅವರು ಉದ್ಘಾಟಿಸಿದರು.

ಬಳಿಕ ಕೊಡವ ಸಮಾಜದಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ನೆರವೇರಿಸಿದರು. ಕಾರ್ಯಕ್ರಮವನ್ನು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಚೋವಂಡ ಕಾಳಪ್ಪ ಅವರು ಉದ್ಘಾಟಿಸಿದರು. ಸಹಕಾರ ಯೂನಿಯನ್ ವ್ಯವಸ್ಥಾಪಕಿ ಮಂಜುಳಾ ನಾಡಗೀತೆ ಹಾಡಿದರೆ, ಕಳ್ಳೇಂಗಡ ಬೋಜಮ್ಮ ಹರೀಶ್ ಪ್ರಾರ್ಥಿಸಿದರು. ವ್ಯವಸ್ಥಾಪಕಿ ಚೋಂದಮ್ಮ ನಿರೂಪಿಸಿದರು. ಬಳಿಕ ಅಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು - ಹಂಪಲು ವಿತರಣೆ ಹಾಗೂ ಕೊಡವ ಸಮಾಜದ ಸನಿಹದ ರಸ್ತೆಯ ಗುಂಡಿಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು.