ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ : ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವರು

ನವದೆಹಲಿ, ಜ. ೪ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ೪೦ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆಗಿನ ೭ನೇ ಸುತ್ತಿನ ಮಾತುಕತೆ ನಡೆದಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದರಾಗಿರುವ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ೪೦ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನೆ ವೇಳೆ ಪ್ರಾಣ ಕಳೆದುಕೊಂಡ ರೈತರಿಗೆ ಗೌರವ ಸಲ್ಲಿಸುವ ಮೂಲಕ ಮಾತುಕತೆ ಆರಂಭಿಸಲಾಯಿತು. ಡಿಸೆಂಬರ್ ೩೦ರಂದು, ಸರ್ಕಾರ ಮತ್ತು ರೈತ ಸಂಘಗಳ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿತ್ತು. ಆದರೆ ಎರಡು ಸಾಮಾನ್ಯ ಬೇಡಿಕೆಗಳಾದ ಕೃಷಿ ತ್ಯಾಜ್ಯ ಸುಡುವುದು ಅಪರಾಧವಲ್ಲ ಮತ್ತು ವಿದ್ಯುತ್ ಸಬ್ಸಿಡಿಗಳ ಮುಂದುವರಿಕೆ ಸರ್ಕಾರ ಸ್ಪಂದಿಸಿತ್ತು. ಕಳೆದ ಒಂದೆರಡು ದಿನಗಳಿಂದ ದೆಹಲಿಯಲ್ಲಿ ವಿಪರೀತ ಚಳಿ ಮತ್ತು ಮಳೆಯಿದ್ದಾಗ್ಯೂ, ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ರೈತರು ಹೇಳಿದ್ದಾರೆ. ವಿವಿಧ ವರ್ಗದ ಜನರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಿಂಘು ಗಡಿಯಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಲಾಲು ಯಾದವ್ ಬಿಹಾರ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ : ಸುಶೀಲ್ ಮೋದಿ

ಪಾಟ್ನಾ, ಜ. ೪ : ರಾಂಚಿಯ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮಾಜಿ ಸಿಎಂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. ಲಾಲು ಜೈಲು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಮೋದಿ 'ಯೋಜನೆ'ಬದ್ದವಾಗಿ ಹೇಗೆ ನಡೆಯಬೇಕು ಎಂದು ಮಾಜಿ ಸಿಎಂ ತಮ್ಮ ಪಕ್ಷದ ಸದಸ್ಯರಿಗೆ ಫೋನ್ ಮೂಲಕ ನಿಯಮಿತವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು. ಸುಮಾರು ಎರಡು ದಶಕಗಳಿಂದ ಬಿಹಾರ ಮತ್ತು ಜೆಡಿಯು ನಡುವಿನ ಬಲವಾದ ಮೈತ್ರಿ ರಾಜ್ಯದಲ್ಲಿ ಬೇರುಬಿಟ್ಟಿದೆ ಆದರೆ ಅಲ್ಲಿನ ರಾಜಕೀಯ ಅಸೂಯೆಯಲ್ಲಿ ಆರ್ ಜೆಡಿ ಹೊತ್ತಿ ಉರಿಯುತ್ತಿದೆ, ಎಂದು ಮೋದಿ ಹೇಳಿದರು.

ಡಿವಿಎಸ್ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು, ಜ. ೪ : ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವತ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸದಾನಂದಗೌಡ ಅವರು ನಗರದ ಅಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಸಹ ಸಿಎಂ ಜತೆಗಿದ್ದರು. ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಚಿತ್ರದುರ್ಗದಲ್ಲಿ ಸಚಿವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಚಿತ್ರದುರ್ಗದಲ್ಲಿರುವ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಚಿವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ನಲ್ಲಿ ಜೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಕರೆ ತರಲಾಯಿತು.

ಚೀನೀ ಕೋಟ್ಯಾಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಕಣ್ಮರೆ!

ನವದೆಹಲಿ, ಜ. ೪ : ಚೀನಾದ ಟೆಕ್ ದೈತ್ಯ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂಬ ಸುದ್ದಿ ಚೀನಾ ಹಾಗೂ ಜಗತ್ತಿನ ಉದ್ಯಮ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಚೀನಾದ ಆಡಳಿತ ಮುಖ್ಯಸ್ಥ ಕ್ಸಿ ಜಿನ್‌ಪಿಂಗ್‌ರೊಡನೆ ನಡೆದ ಸಂಘರ್ಷದ ತರುವಾಯ ಜಾಕ್ ಮಾ ಕಳೆದ ಎರಡು ತಿಂಗಳುಗಳಿAದ ಪತ್ತೆಯಾಗಿಲ್ಲ. ‘ಆಫ್ರಿಕಾದ ಬಿಸಿನೆಸ್ ಹೀರೋಸ್' ಎಂಬ ಟಿವಿ ಕಾರ್ಯಕ್ರಮದ ಫೈನಲ್‌ನಲ್ಲಿ ಜಾಕ್ ಮಾ ಅವರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಲಾಗಿತ್ತು.ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಆದರೆ ಅವರ ಭಾವಚಿತ್ರವನ್ನೀಗ ತೀರ್ಪುಗಾರರ ಅಧಿಕೃತ ವೆಬ್ ಪುಟದಿಂದ ತೆಗೆದುಹಾಕಲಾಗಿದೆ. ಈ ಕಾರ್ಯಕ್ರಮದ ಫೈನಲ್ ಸುತ್ತು ನವೆಂಬರ್ ನಲ್ಲಿ ನಡೆದಿತ್ತು. ಜಾಕ್ ಮಾ ಚೀನಾದ ಆಡಳಿತ ಮುಖ್ಯಸ್ಥರು ಮತ್ತು ಅದರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸುವ ಮಾತನ್ನಾಡಿದ ಸ್ವಲ್ಪ ಸಮಯದ ನಂತರ ಜಾಕ್ ಮಾ ಅವರನ್ನು ಬೀಜಿಂಗ್‌ನ ಅಧಿಕಾರಿಗಳು ಕರೆದೊಯ್ದಿದ್ದರು. ಅವರ ಕಂಪನಿಯ ೩೭ ಬಿಲಿಯನ್ ಇನಿಶಿಯಲ್ ಪಬ್ಲಿಕ್ ಆಫರ್ ನ್ನು ಅಮಾನತುಗೊಳಿಸಲಾಗಿದೆ. ನಂತರ ಅವರು ಎಲ್ಲಿಯೂ ಪತ್ತೆಯಾಗಿಲ್ಲ ವರದಿ ತಿಳಿಸಿದೆ.

ಗಂಗೂಲಿ ಆರೋಗ್ಯ ಸ್ಥಿರ

ಕೊಲ್ಕತ್ತಾ, ಜ. ೪ : ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ದಿಢೀರ್ ಕೊಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಗಂಗೂಲಿಯವರನ್ನು ಆ್ಯಂಜಿಯೋಪ್ಲಾಸ್ಟಿ ಒಳಪಡಿಸಿದ್ದಾರೆ. ಗಂಗೂಲಿಯವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವುಡ್‌ಲ್ಯಾಂಡ್ ಆಸ್ಪತ್ರೆ ವೈದ್ಯರು ಸದ್ಯ ಆರೋಗ್ಯ ಚೆನ್ನಾಗಿದೆ, ರಕ್ತ ಸಂಚಾರ ಸಾಧಾರಣವಾಗಿದೆ. ರಕ್ತದಲ್ಲಿ ಕೊಲೆಸ್ಟಾçಲ್ ಕಡಿಮೆ ಮಾಡುವ ಲಸಿಕೆ ಹಾಗೂ ಎರಡು ಬಾರಿ ಆ್ಯಂಟಿ ಪ್ಲೆಟ್‌ಲೇಟ್ಸ್ ಡೋಸ್‌ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಗಂಗೂಲಿಯವರು ಆಸ್ಪತ್ರೆಯಲ್ಲಿದ್ದ ಸಂದರ್ಭ ಕರೆ ಮಾಡಿದ ಮೋದಿ, ಗಂಗೂಲಿ ಪತ್ನಿ ಜೊತೆ ಮಾತನಾಡಿ ನಂತರ ಗಂಗೂಲಿ ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ.