ಕುಶಾಲನಗರ, ಜ. ೨: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಶಾಲೆಗೆ ಗೈರು ಹಾಜರಾಗಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಸಂಯೋಜಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ವರದಿ ಮಾಡಿರುವ ಪ್ರಕರಣ ನಡೆದಿದೆ.
ಸೋಮವಾರಪೇಟೆ ತಾಲೂಕಿನ ದೊಡ್ಡಕೊಡ್ಲಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಕಳೆದ ಅಕ್ಟೋಬರ್ ೧೦ ರಿಂದ ಡಿಸೆಂಬರ್ ೨ ರ ತನಕ ಶಾಲೆಗೆ ಗೈರು ಹಾಜರಾಗಿರುವ ಬಗ್ಗೆ ವರದಿಯಲ್ಲಿ ತಿಳಿಸಿದ್ದು, ಅಕ್ಟೋಬರ್ ೨ ರಂದು ಶಾಲೆಗೆ ಭೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಹಾಜರಾತಿ ಮತ್ತಿತರ ದಾಖಲೆ ಪರಿಶೀಲಿಸಿದಾಗ ಗೈರು ಹಾಜರಾದ ದಿನಗಳಿಗೆ ಯಾವುದೇ ಕಾರಣಗಳು ನಮೂದಾಗಿರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ‘ಶಕ್ತಿ’ಗೆ ತಿಳಿಸಿದ್ದಾರೆ.