ಭಾಗಮಂಡಲ ಕ್ಷೇತ್ರವು ಸ್ಕಂದ ಕ್ಷೇತ್ರವಾಗಿದ್ದು ಪೂರ್ವಶಿಷ್ಟ ಸಂಪ್ರದಾಯದAತೆ ಕೆಲವೊಂದು ಧಾರ್ಮಿಕ ನಿಯಮಗಳನ್ನು ಕಾಪಾಡಿ ಕೊಂಡು ಬರುವ ಅರ್ಚಕರು ಪೂಜಾ ಕೈಂಕರ್ಯವನ್ನು ನೆರೆವೇರಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವೈದಿಕ ಕುಟುಂಬದ ಕಡೆಯಿಂದ ಪೂಜಾ ಕಾರ್ಯವನ್ನು ಮಾಡುತ್ತಾರೆ. ಭಾಗಮಂಡಲದಲ್ಲಿರುವ ಸುಬ್ರಹ್ಮಣ್ಯನ ಸಾನಿಧ್ಯ ಮಾಕುಕ್ಕೆ ಸುಬ್ರಹ್ಮಣ್ಯ ದೇವರ ಸಾನಿಧ್ಯದಂತೆ ಪ್ರಖ್ಯಾತಿ ಪಡೆದಿದೆ. ಇಲ್ಲಿಯೂ ಹರಕೆ ಪ್ರಾರ್ಥನೆ ಮಾಡಿದರೆ ಫಲಗಳು ದೊರಕುತ್ತವೆ. ಅದಕ್ಕಾಗಿ ರಾಜರ ಕಾಲದಿಂದಲೂ ಪ್ರತಿವರ್ಷವೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಬ್ರಹ್ಮದಾಯ ಸೇವೆಗಳನ್ನು ನೆರವೇರಿಸಲು ಕೊಡಗು ದೇವಸ್ಥಾನ ನಿಧಿ ವ್ಯವಸ್ಥಾಪನಾ ಸಮಿತಿಗೆ ಸರ್ಕಾರದ ನಿರ್ದೆಶನವಿದ್ದು ಏಕರೂಪ ಶಾಸನದ ಪೂರ್ವದಲ್ಲಿ ಈ ಸೇವೆಯು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲು ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಇಂದಿಗೂ ಶಿಲೆಯಿಂದ ಕೆತ್ತಲ್ಪಟ್ಟ ನಾಗನ ವಿವಿಧ ರೂಪಗಳಿರುವುದನ್ನು ಕಾಣಬಹುದು ಹಾಗೂ ಈ ಗರ್ಭಗುಡಿಯು ವಿಶೇಷ ರೀತಿಯಿಂದ ನಿರ್ಮಾಣಗೊಂಡಿದ್ದು, ದೇವಾಲಯದ ಬಲಭಾಗದ ಗೋಡೆಯಲ್ಲಿ ಸೂರ್ಯಚಂದ್ರರಿರುವ ಚಿಹ್ನೆಯನ್ನು ಕಾಣಬಹುದು. ಮಕರ ಮಾಸದ ಸಂಕ್ರಾAತಿಯAದು ಸೂರ್ಯನ ಕಿರಣವು ನೇರವಾಗಿ ಈ ಜಾಗಕ್ಕೆ ಇಂದಿಗೂ ಬೀಳುತ್ತದೆ. ಅದೇ ಸ್ಥಳದಲ್ಲಿ ೨ ಹಲ್ಲಿಗಳ ಕೆತ್ತನೆಯನ್ನೂ ಕಾಣಬಹುದು. ಮನುಷ್ಯನ ಶರೀರದ ಮೇಲೆ ಅಕಸ್ಮಾತ್ತಾಗಿ ಹಲ್ಲಿಗಳು ಬಿದ್ದರೆ (ಪತನ) ಅದಕ್ಕೆ ಪ್ರಾಯಶ್ಚಿತ್ತವಾಗಿ ಸ್ಕಂದನಿಗೆ ಮೂರು ಪ್ರದಕ್ಷಿಣೆ ಬಂದು ಹಲ್ಲಿಯ ಚಿತ್ರವನ್ನು ಮುಟ್ಟಿ ಭಕ್ತಿಯಿಂದ ನಮಿಸಿದರೆ ಪರಿಹಾರವು ಸಿಗುತ್ತದೆ ಎಂಬ ನಂಬಿಕೆ ಈಗಲೂ ಇದೆ. ಅದೇ ಗುಡಿಯ ಮುಂಭಾಗದ ತೀರ್ಥ ಮಂಟಪದಲ್ಲಿ ಅಷ್ಟ ದಿಕ್ಪಾಲಕರ ಕಾಷ್ಟ ಶಿಲ್ಪ, ಸಮುದ್ರ ಮಥನದ ಚಿತ್ರಗಳು ಅತ್ಯಂತ ಸುಂದರ ಕೆತ್ತನೆಯಲ್ಲಿವೆ. ಇನ್ನು ಗರ್ಭಗುಡಿಯ ಮೇಲ್ಛಾವಣಿ ಯಲ್ಲಿ ಟಿಪ್ಪುವು ದೇವಾಲಯದ ಶಿಲಾಗಜಗಳನ್ನು ಭಗ್ನಗೊಳಿಸಿದ್ದಕ್ಕೆ ಬಳಿಕ ತಪ್ಪೊಪ್ಪಿಗೆ ಮಾಡಿದ್ದಕ್ಕೆ ಒಂದು ಬೆಳ್ಳಿಯ ತಗಡನ್ನು ಸಾಂಕೇತಿಕವಾಗಿ ಅಳವಡಿಸ ಲಾಗಿದೆ. ವಾರ್ಷಿಕೋತ್ಸವದ ಸಮಯದಲ್ಲಿ ಭಗಂಡೇಶ್ವರ-ಸುಬ್ರಹ್ಮಣ್ಯ ದೇವರಿಗೆ ತೊಟ್ಟಿಲು ಉತ್ಸವಗಳನ್ನು ಇದೇ ಮಂಟಪದಲ್ಲಿ ನಡೆಸಲಾಗುವುದಲ್ಲದೆ, ವರ್ಷಕ್ಕೊಂದಾವರ್ತಿ ಸಮೀಪದ ತಾವೂರು ಗ್ರಾಮ ದೇವತೆಯಾದ ಮಹಿಷಮರ್ದಿನಿ ದೇವರ ವಾರ್ಷಿಕ ಉತ್ಸವದ ಸಮಯದಲ್ಲಿ ಅವಭೃಥ ಸ್ನಾನ ಮುಗಿಸಿ ಇದೇ ಮಂಟಪದಲ್ಲಿ ತೊಟ್ಟಿಲು ಉತ್ಸವವು ನಡೆಯುವುದು ವಿಶೇಷವಾಗಿದೆ.

ಕ್ಷೇತ್ರದ ಸಾನ್ನಿಧ್ಯದಲ್ಲಿ ಶ್ರೀ ಮಹಾವಿಷ್ಣು ಇರುವುದರಿಂದಲೇ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಮಹತ್ವವೂ ಇದೆ. ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮುಗಿಸಿ ಮೃತಪಟ್ಟವರಿಗೆ ಪಿತೃಕ್ರಿಯೆಯನ್ನು ಮುಗಿಸಿ ಮೋಕ್ಷ ದೊರಕಬೇಕಾದರೆ ಶ್ರೀ ಮಹಾವಿಷ್ಣುವಿನ ಸಾನ್ನಿಧ್ಯದಲ್ಲಿ ಭಕ್ತಿಯಿಂದ ಪೂಜೆ-ಪ್ರಾರ್ಥನೆಯಿಂದ ಶರಣಾಗತರಾಗುವುದು ಸಹಜ. ಈ ಎರಡೂ ಸಾನ್ನಿಧ್ಯಗಳಲ್ಲಿ ಪುತ್ರಾಪೇಕ್ಷೆಯ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಸಾನ್ನಿಧ್ಯದ ಕಂಬಗಳಲ್ಲಿ ಶ್ರೀಮನ್ನಾನಾರಾಯಣನ ಮತ್ಸö್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ರಾಮನ ಚಿತ್ರಗಳಿವೆ. ತೀರ್ಥ ಮಂಟಪದಲ್ಲಿ ನವಗ್ರಹಗಳ ಕಾಷ್ಟ ಶಿಲ್ಪಗಳನ್ನು ಕಾಣಬಹುದು. ಅದರ ಮುಂಭಾಗದ ಕಂಬದಲ್ಲಿ ಶ್ರೀಕೃಷ್ಣನ ಕಾಳಿಂಗ ಮರ್ದನ, ಗೋಪಿಕಾ ವಸ್ತಾçಪರಹಣದ ಚಿತ್ರಣವನ್ನು ಅಲಂಕಾರ ಯುತವಾಗಿ ಕೆತ್ತನೆ ಮಾಡಿರುವುದನ್ನು ಕಾಣಬಹುದು. ಶ್ರೀ ಭಗಂಡೇಶ್ವರ ದೇವರ ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲಿ ಸುಮಾರು ಒಂದು ಮೀಟರ್‌ನಷ್ಟು ಉದ್ದದ ಅಳತೆಗೋಲು ಕೆತ್ತಲ್ಪಟ್ಟಿದೆ. ದೇವಸ್ಥಾನವನ್ನು ಕೋಲು ಲೆಕ್ಕದಲ್ಲಿ ಆಗಿನ ರಾಜರು ನಿರ್ಮಿಸಿದ್ದಾರೆಂದು ಹೇಳಲ್ಪಟ್ಟಿದೆ. ಇಕ್ಕೇರಿ ಕೋಲು ಈಗಲೂ ಚಾಲ್ತಿಯಲ್ಲಿದೆ. ರಾಜಾಜ್ಞೆಯಂತೆ ರಾಜನ ಅಧೀನಕ್ಕೊಳ ಪಡುವ ಪ್ರದೇಶದವರು ಗೃಹ, ದೇಗುಲ ನಿರ್ಮಾಣಕ್ಕೆ ಈ ಕೋಲಿನ ಅಳತೆಯಂತೆ ನಿರ್ಮಿಸುವಂತಾಗಬೇಕೆನ್ನುವ ಆಜ್ಞೆ ನೀಡಲಾಗಿತ್ತು. ಪ್ರಸ್ತುತವಾಗಿಯೂ ಆಸ್ತಿಕ ಭಕ್ತರು ಈ ಅಳತೆಯನ್ನು ಕೊಂಡೊಯ್ಯುತ್ತಾರೆ. ಹಾಗೆಯೇ ಈ ಅಳತೆಯಲ್ಲಿ ನಿರ್ಮಿಸುವವರು ಶ್ರೇಯಸ್ಕರವೆಂದು ನಂಬಿಕೆ ಇನ್ನೂ ಪ್ರಚಲಿತ ದಲ್ಲಿದೆ. ದೇವಾಲಯದ ಹೊರಾಂಗಣದ ಹಿಂಭಾಗದಲ್ಲಿ ನಂದಾದೀಪದ ಕೋಣೆ, ಪತ್ತಾಯದ ಕೋಣೆಯನ್ನು ಕಾಣಬಹುದು. ಕಾವೇರಿ ತುಲಾ ಸಂಕ್ರಮಣವು ಯಶಸ್ವಿಯಾಗಿ ನಡೆಯಲೆಂದು ಒಂದು ತಿಂಗಳುಗಳ ಕಾಲ ತುಪ್ಪದ ದೀಪವನ್ನು ಉರಿಸುವ ಹಾಗೂ ಅಕ್ಕಿ, ಭತ್ತ ಸಂಗ್ರಹ ಮಾಡುವ ಪತ್ತಾಯವು ಉಳಿದು ಬಂದಿದ್ದು ಪೂರ್ವಶಿಷ್ಟ ಸಂಪ್ರದಾಯವು ಆಚರಣೆಯಲ್ಲಿದೆ.

ತಲಕಾವೇರಿಯಲ್ಲಿ ಮೆಟ್ಟಲು ಗುಡ್ಡೆ

ತಲಕಾವೇರಿಗೆ ಕಾಲು ನಡಿಗೆಯಲ್ಲಿ ಸುಮಾರು ೩ ಕಿ.ಮೀ. ನಡೆದ ನಂತರ ಸಿಕ್ಕುವುದೇ ‘ಮೆಟ್ಟಲುಕಲ್ಲು ಗುಡ್ಡೆ’ ಸುಮಾರು ೧೫೦ ಮೆಟ್ಟಲುಗಳಿರುವ ಚಿಕ್ಕ ಬೆಟ್ಟವನ್ನು ಹತ್ತಿದ ಕೂಡಲೇ ತಲಕಾವೇರಿಯ ಪುಣ್ಯಕ್ಷೇತ್ರದ ವಿಹಂಗಮ ನೋಟ. ಅದೇ ಜಾಗದಲ್ಲಿದೆ ಸಲಾಂ ಕಟ್ಟೆ. ಟಿಪ್ಪು ಈ ಕ್ಷೇತ್ರಕ್ಕೆ ಬಂದು ಎಲ್ಲ ಕಡೆ ಸಮುದ್ರದಂತೆ ಕಂಡಾಗ ಆ ಸ್ಥಳದಲ್ಲಿಯೇ ಸಲಾಂ ಹಾಕಿ ವಾಪಾಸ್ಸಾದನೆನ್ನುವ ಐತಿಹ್ಯವಿದೆ. ಆ ಸ್ಥಳವೇ ‘ಸಲಾಂ ಕಟ್ಟೆ’ ಎಂದೆನಿಸಿಕೊAಡಿದೆ. ಅದರ ಕುರುಹಾಗಿ ಒಂದು ಚಿಕ್ಕ ಬಸವನ ಕಟ್ಟೆಯನ್ನು ಕಾಣಬಹುದು.

?ಎಸ್. ಎಸ್. ಸಂಪತ್‌ಕುಮಾರ್, ಭಾಗಮಂಡಲ.