ವೀರಾಜಪೇಟೆ, ಡಿ. ೩೧: ೨೦೨೦ ರ ಏಪ್ರಿಲ್‌ನಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಹೊಸವರ್ಷದೊಂದಿಗೆ ಪ್ರಾರಂಭಗೊಳ್ಳಲಿದೆ. ಜನವರಿ ೧ ರ ಶುಕ್ರವಾರದಿಂದ ೧೦ನೇ ತರಗತಿಗಳಿಗೆ ತರಗತಿ ಆರಂಭವಾಗಲಿದ್ದು, ೬ ರಿಂದ ೯ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಯಲಿದೆ.

ಈ ಬಗ್ಗೆ ಸಿದ್ಧತೆಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿಯವರು ಪತ್ರಿಕೆಗೆ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಒಂದಕ್ಕಿAತ ಹೆಚ್ಚು ಬಾರಿ ಎಲ್ಲಾ ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳ ಸಭೆಯನ್ನು ನಡೆಸಲಾಗಿದ್ದು, ಕೋವಿಡ್ ಹಿನ್ನೆಲೆಯ ಸರಕಾರಿ ನಿರ್ದೇಶನಗಳನ್ನು ಹಾಗೂ ಸಾಮಾನ್ಯ ನೀತಿ ಪಾಲನಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಲಾಗಿದೆ. ಸರಕಾರಿ ನೀತಿ ಸಂಹಿತೆಯ ಪ್ರತಿಯನ್ನು ವಿತರಿಸಲಾಗಿದ್ದು ಮನವರಿಕೆ ಮಾಡುವ ಕಾರ್ಯವು ನಡೆದಿದೆ. ಎಲ್ಲಾ ಶಾಲೆೆಗಳಿಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಶುಚಿತ್ವ-ನೈರ್ಮಲ್ಯದ ಕಾರ್ಯಗಳು ನಡೆದಿವೆ.

ಸರಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಸಮಿತಿಗಳ ಸಭೆಯನ್ನು ಕರೆದು ಶಾಲೆ ಪ್ರಾರಂಭವಾದಲ್ಲಿ ಅನುಸರಿಸಬೇಕಾದ ಸುರಕ್ಷಾ ಕ್ರಮದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲಾ ಪೋಷಕರುಗಳ ಒಪ್ಪಿಗೆ ಪತ್ರವನ್ನೂ ಕಡ್ಡಾಯವಾಗಿ ಪಡೆದುಕೊಳ್ಳಲಾಗಿದೆ. ಪೋಷಕರ ಸಂಪೂರ್ಣ ಒಪ್ಪಿಗೆಯೊಂದಿಗೆ ಮಾತ್ರ ವಿದ್ಯಾರ್ಥಿಗಳು ಶಾಲೆಗೆ ಬರತಕ್ಕದ್ದು. ಹಾಜರಾಗುವ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತç ಕಡ್ಡಾಯವಾಗಿ ಧರಿಸಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿನ ಗೊಂದಲಗಳನ್ನು ನಿವಾರಿಸಿ ಭರವಸೆ ಮೂಡಿಸುವ ಕಾರ್ಯಗಳನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಹದಿನೈದು ವಿದ್ಯಾರ್ಥಿಗಳಿಗೆ ಒಂದರAತೆ ಗುಂಪು ಮಾಡಲಾಗಿದ್ದು, ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಸರ್ಕಾರದ ವೇಳಾಪಟ್ಟಿಯಂತೆ ಶಿಕ್ಷಕರುಗಳು ಪಾಳಿ ಅನುಸಾರ ಬೋಧಿಸಲಿದ್ದಾರೆ. ಕಳೆದ ಒಂದು ವಾರದಿಂದ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಕಾರ್ಯಕ್ಕೆ ತಾಲೂಕು ಆರೋಗ್ಯ ಇಲಾಖೆ ಸಂಪೂರ್ಣ ಕೈಜೋಡಿಸಿದೆ. ಶಾಲಾ ಪುನರಾರಂಭದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳನ್ನೂ ಸಂಪರ್ಕಿಸಬಹುದಾಗಿಯೂ ಅವರು ತಿಳಿಸಿದರು.