ಗೋಣಿಕೊಪ್ಪಲು, ಜ.೧: ತ್ಯಾಜ್ಯ ವಸ್ತುಗಳನ್ನು ಬೇರೆಯವರ ಕಾಫಿ ತೋಟದಲ್ಲಿ ಬಿಸಾಡುತ್ತಿದ್ದವನನ್ನು ಕಂಡು ಹಿಡಿದ ಗ್ರಾಮಸ್ಥರು ಆತನಿಂದ ದಂಡ ಕಟ್ಟಿಸಿ ಸುರಿದ ತ್ಯಾಜ್ಯವನ್ನು ಆತನಿಂದಲೇ ತೆಗೆಸಿದ ಅಪರೂಪದ ಘಟನೆ ಪೊನ್ನಂಪೇಟೆ ಸಮೀಪದ ಕಿರುಗೂರುವಿನಲ್ಲಿ ನಡೆದಿದೆ.

ಕಲ್ಯಾಣ ಮಂಟಪಗಳಲ್ಲಿ ಶುಭ ಕಾರ್ಯ ನಡೆದ ನಂತರ ಸಂಗ್ರಹವಾಗುವ ತ್ಯಾಜ್ಯದ ರಾಶಿಗಳನ್ನು ರಾತ್ರೋರಾತ್ರಿ ಮೂಟೆಗಳಲ್ಲಿ ಸಂಗ್ರಹಿಸಿ ನಂತರ ಇದನ್ನು ಸಮೀಪದ ಸಮೀಪದ ಪೊನ್ನಂಪೇಟೆ - ಕಿರುಗೂರು ಸಂಪರ್ಕ ರಸ್ತೆ ಬದಿಯ ಕಾಫಿ ತೋಟದಲ್ಲಿ ರಾತ್ರಿ ವೇಳೆಯಲ್ಲಿ ಸುರಿದು ತೆರಳುತ್ತಿದ್ದರು. ಮುಂಜಾನೆ ಬೀದಿ ನಾಯಿಗಳು ತ್ಯಾಜ್ಯಗಳನ್ನು ಎಳೆದಾಡಿ ಅದರಲ್ಲಿದ್ದ ಮಾಂಸ ಇತ್ಯಾದಿಗಳನ್ನು ರಸ್ತೆಯ ಉದ್ದಕ್ಕೂ ಹರಡುತ್ತಿದ್ದವು. ಇದರಿಂದ ಈ ಪ್ರದೇಶವು ಘಟನೆಯನ್ನು ಗಮನಿಸಿದ ಕಿರುಗೂರು ಗ್ರಾಮ ಪಂಚಾಯ್ತಿ ನೂತನ ಸದಸ್ಯ ಚೆಪ್ಪುಡೀರ ರಾಕೇಶ್ ದೇವಯ್ಯ ಆ ವ್ಯಕ್ತಿಯನ್ನು ಕಂಡು ಹಿಡಿದು ಕಸ ವಿಲೇವಾರಿ ಮಾಡಿಸಿ, ದಂಡ ಕಟ್ಟಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಇಂದು ಮುಂಜಾನೆ ಗ್ರಾಮಸ್ಥರೊಂದಿಗೆ ತ್ಯಾಜ್ಯ ಸುರಿದಿರುವ ಪ್ರದೇಶಕ್ಕೆ ತೆರಳಿ ತ್ಯಾಜ್ಯದಲ್ಲಿದ್ದ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಕಸ ಸುರಿದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂದರ್ಭ ಶುಭ ಕಾರ್ಯಕ್ಕೆ ಬೇಕಾದ ವಸ್ತುಗಳನ್ನು ಗೋಣಿಕೊಪ್ಪಲುವಿನ ಅಂಗಡಿಯೊAದರಲ್ಲಿ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ನಂತರ ಮದುವೆ ಮಂಟಪಕ್ಕೆ ತೆರಳಿ ಅಲ್ಲಿರುವ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ್ದಾರೆ.

ಈ ಸಂದರ್ಭ ಮಂಟಪದಿAದ ರಾತ್ರಿ ವೇಳೆ ತ್ಯಾಜ್ಯವನ್ನು ಹೆಚ್ಚಿನ ಹಣ ಪಡೆದು ಆಟೋ ರಿಕ್ಷಾದಲ್ಲಿ ಕೊಂಡೊಯ್ದ ವಿವಿಧ ಪ್ರದೇಶಕ್ಕೆ ಸುರಿಯುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ತ್ಯಾಜ್ಯ ಕೊಂಡೊಯ್ದ ಚಾಲಕನನ್ನು ಸ್ಥಳಕ್ಕೆ ಕರೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಿಸಿದಾಗ ಶುಭ ಕಾರ್ಯದ ನಂತರ ಸಂಗ್ರಹವಾದ ತ್ಯಾಜ್ಯವನ್ನು ಸುರಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂದರ್ಭ ಗ್ರಾಮಸ್ಥರು ಈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪAಚಾಯ್ತಿ ಸದಸ್ಯ ಚೆಪ್ಪುಡೀರ ರಾಕೇಶ್ ದೇವಯ್ಯ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಕರೆಸಿ ತ್ಯಾಜ್ಯ ಸುರಿದ ಬಗ್ಗೆ ದಂಡ ವಿಧಿಸಿದ್ದಾರೆ. ರಾಶಿರಾಶಿಯಾಗಿ ಬಿದ್ದಿದ್ದ ತ್ಯಾಜ್ಯವನ್ನು ಅದೇ ವ್ಯಕ್ತಿಯಿಂದ ಸಂಪೂರ್ಣ ಶುಚಿಗೊಳಿಸಿ ರಾಶಿಗಟ್ಟಲೆ ಕಸದ ಮೂಟೆಗಳನ್ನು ಆತನ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭ ಚೆಪ್ಪುಡೀರ ವಿವೇಕ್, ಪೆಮ್ಮಂಡ ಮಧು ವಿಶ್ವನಾಥ್, ಚೆಪ್ಪುಡೀರ ಸುನೀಲ್ ತಿಮ್ಮಯ್ಯ, ಮಾಜಿ ಸದಸ್ಯರಾದ ಮಂಜುನಾಥ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಗಯಾ, ಗ್ರಾಮದ ಪ್ರಮುಖರು, ಪಂಚಾಯ್ತಿ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ.ಜಗದೀಶ್