ವಶಮಡಿಕೇರಿ, ಡಿ. ೩೧: ಅಕ್ರಮವಾಗಿ ತೋಟವೊಂದರಲ್ಲಿ ಕಡಿದು ಸಂಗ್ರಹಿಸಿಟ್ಟಿದ್ದ ರೂ. ೭ ಲಕ್ಷ ಮೌಲ್ಯದ ಬೀಟೆ ಮರದ ನಾಟಾಗಳನ್ನು ವೀರಾಜಪೇಟೆ ಅರಣ್ಯ ವಲಯದ ಅರಣ್ಯ ಇಲಾಖಾಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಮ್ಮತ್ತಿ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಹೊಸಕೋಟೆ ಗ್ರಾಮದ ಖಾಲೀದ್ ಅವರ ಪತ್ನಿ ಸಾರಮ್ಮ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರದ ೧೬ ನಾಟಾಗಳನ್ನು (೩.೮೩೭ ಘ.ಮೀ.) ಸಾಗಾಟ ಮಾಡಲು ತಯಾರು ಇರಿಸಿ ಮರದ ತೊಗಟೆಗಳನ್ನು ತೆಗೆದು ದಾಸ್ತಾನು ಮಾಡಲಾಗಿತ್ತು. ವೀರಾಜಪೇಟೆ ಅರಣ್ಯ ವಲಯದ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಇದನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಸಾರಮ್ಮ, ಅಬ್ದುಲ್ ಖಾದರ್ ಅಲಿಯಾಸ್ ಅಪು, ಶರೀಫ್ ಅವರ ಮೇಲೆ ಅರಣ್ಯ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಕ್ರಪಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶನಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ಎಂ. ದೇವಯ್ಯ ಹಾಗೂ ದೇಯಂಡ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಚಂದ್ರಹಾಸ ಪಟಗಾರ ಮತ್ತು ಆರ್.ಆರ್.ಟಿ. ತಂಡದ ಸಿಬ್ಬಂದಿವರ್ಗ, ವಾಹನ ಚಾಲಕರಾದ ಅಚ್ಚಯ್ಯ ಹಾಗೂ ಅಶೋಕ ಪಾಲ್ಗೊಂಡಿದ್ದರು.