ಮಡಿಕೇರಿ ಡಿ. ೩೧: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ೨೦೧೯ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಕೊಡಗಿನ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಪ್ರದಾನ ಮಾಡಲಾಯಿತು. ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಪತ್ರಕರ್ತ ಬೊಳ್ಳಜಿರ ಬಿ. ಅಯ್ಯಪ್ಪ ಅವರ ೨೦೧೯ ಜುಲೈ ೨೪ ರಂದು ಕಾವೇರಿ ಟೈಮ್ಸ್ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಬದುಕಿಗಾಗಿ ಅಡುಗೆ ಉತ್ಪನ್ನಗಳ ತಯಾರಿಕೆಯಲ್ಲಿ ಮಗ್ನರಾಗಿರುವ ಕಾಲೂರಿನ ಸಂತ್ರಸ್ತ ಮಹಿಳೆಯರು’ ಎಂಬ ವರದಿಗೆ ಪ.ಗೋ. ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ತಲಾ ಐದು ಸಾವಿರ ನಗದು ಹಾಗೂ ನೆನಪಿನ ಕಾಣಿಕೆಯನ್ನು ಹೊಂದಿದ್ದು, ೨೦ ವರ್ಷಗಳ ನಂತರ ಕೊಡಗು ಜಿಲ್ಲೆಗೆ ಈ ಪ್ರಶಸ್ತಿ ಲಭಿಸಿದೆ. ಕರಾವಳಿ ಭಾಗದ ಆರು ಜಿಲ್ಲೆಗಳನ್ನು ಒಳಗೊಂಡ ವರದಿಗಳನ್ನು ಪ್ರಶಸ್ತಿಗಾಗಿ ಪರಿಶೀಲಿಸಲಾಗಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷಿ÷್ಮÃ ಪ್ರಸಾದ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಡಿಸಿಪಿ ವಿನಯ.ಎ ಗಾಂವಕರ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉಪಸ್ಥಿತರಿದ್ದರು.