ಗೋಣಿಕೊಪ್ಪ ವರದಿ, ಡಿ. ೩೧: ಕೇರಳದ ಉಳಿಕಲ್ ಬೈತೂರಚ್ಚನ ನಮ್ಮೆಗೆ ಸಾಂಪ್ರದಾಯಿಕವಾಗಿ ಸ್ವಾಗತಿಸುವ ಕೋಮರತಚ್ಚ ಕೊಡಗಿಗೆ ಆಗಮಿಸುವ ಮೂಲಕ ಹಬ್ಬಕ್ಕೆ ಚಾಲನೆ ದೊರೆತಿದೆ.
ಇಂದು ಹೆಗ್ಗಳ ದೇವಸ್ಥಾನ, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಚರಣೆ ಮಾಹಿತಿ ನೀಡಲಾಯಿತು. ಈ ಸಂದರ್ಭ ಹೆಗ್ಗಳ ದೇವಸ್ಥಾನ ಸಮಿತಿ ಅಧ್ಯಕ್ಷ ಅಮ್ಮಣಕುಟ್ಟಂಡ ಬೋಪಣ್ಣ ಹಾಗೂ ಗ್ರಾಮಸ್ಥರು, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಮಂಡೇಪAಡ ಮುದ್ದಪ್ಪ ಹಾಗೂ ಗ್ರಾಮಸ್ಥರು ಬರ ಮಾಡಿಕೊಂಡು ಸತ್ಕರಿಸಿದರು.
ಗುರುವಾರ ದೇವಣಗೇರಿ ಈಶ್ವರ ದೇವಸ್ಥಾನ, ತಲಕಟಕೇರಿ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಬೈತೂರು ನಮ್ಮೆಯ ತಕ್ಕರ ಸ್ಥಾನದಲ್ಲಿರುವ ಪುಗ್ಗೇರ ಕುಟುಂಬದ ಐನ್ಮನೆಗೆ ತೆರಳಿ ಪ್ರಸಾದ ಸ್ವೀಕರಿಸಿತು.
ಈ ಸಂದರ್ಭ ಗ್ರಾಮದ ಐಚಂಡ, ಪುಗ್ಗೇರ, ಬೀನಂಡ, ಮೇದೂರ ಕುಟುಂಬಸ್ಥರು ಪಾಲ್ಗೊಂಡರು. ದೇವಣಗೇರಿ ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮುಕ್ಕಾಟೀರ ರಾಜಪ್ಪ, ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಪುಗ್ಗೇರ ವಿಜು ನಂಜುAಡ, ಪುಗ್ಗೇರ ಕುಟುಂಬ ಅಧ್ಯಕ್ಷ ಪುಗ್ಗೇರ ನಂದಾ ಸೇರಿದಂತೆ ಗ್ರಾಮದ ಮಹಿಳೆಯರು, ಮಕ್ಕಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ದೇವರ ಕಡತಲೆಯೊಂದಿಗೆ ಆಗಮಿಸಿದ್ದ ಕೋಮರತಚ್ಚ ಹಬ್ಬದ ಆಚರಣೆ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿತು. ಫಲಹಾರ ಸೇವಿಸಿ ಹಾಲುಗುಂದ ಭಗವತಿ, ಮೈತಾಡಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿತು.
ಈ ಸಂದರ್ಭ ಪುಗ್ಗೇರ ತಕ್ಕ ಪೊನ್ನಪ್ಪ ಮಾತನಾಡಿ, ಹಬ್ಬದ ಹಿನ್ನೆಲೆಯಂತೆ ಬೈತೂರು ದೇವಸ್ಥಾನದಿಂದ ಕೋಮರತಜ್ಜ ಆಗಮಿಸಿ ಕೊಡಗಿನ ದೇವಸ್ಥಾನಗಳಿಗೆ ಮಾಹಿತಿ ನೀಡುವ ಆಚರಣೆ ನಡೆಯುತ್ತಿದೆ. ಸಾಂಪ್ರದಾಯಿಕ ಆಚರಣೆಯಲ್ಲಿ ನಾವು ತೊಡಗಿಕೊಳ್ಳಲಿದ್ದೇವೆ. ಜನವರಿ ೨೨ ರಿಂದ ಜ. ೨೫ ರವರೆಗೆ ನಡೆಯುವ ನಮ್ಮೆಯಲ್ಲಿ ಕೊಡಗಿನ ದೇವರುಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ೪ ದೇವರುಗಳಿಗೆ ಸಾಂಪ್ರದಾಯಿಕವಾಗಿ ಪಾಲ್ಗೊಳ್ಳಲು ನೀಡಿದ್ದ ಅವಕಾಶವನ್ನು ಕೂಡ ಕೊರೊನಾ ವೈರಸ್ ಹೆಚ್ಚು ಹರಡುತ್ತಿರುವ ಕಾರಣದಿಂದ ಹಿಂಪಡೆಯಲಾಗಿದೆ. ಪದ್ಧತಿಗೆ ಚ್ಯುತಿ ಬಾರದಂತೆ ಕೇರಳ ಸರ್ಕಾರದ ಸೂಚನೆ ಪಾಲಿಸಲಾಗುತ್ತದೆ. ಕೊಡಗಿನ ಭಕ್ತರು, ಮೈಮೇಲೆ ದೇವರು ಬರುವ ಎಲ್ಲ್ಲರ ಸಹಕಾರ ಅಗತ್ಯ ಎಂದರು.