ಮಡಿಕೇರಿ, ಡಿ.೩೦: ಜಿಲ್ಲೆಯಲ್ಲಿ ಭಾರೀ ಕುತೂಹಲ ಸೃಷ್ಟಿಸಿದ್ದ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಂತ ಪ್ರಮುಖ ವ್ಯವಸ್ಥೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿತು. ಕೇವಲ ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳು ಮಾತ್ರವಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಚಾರವಾಗಿದ್ದ ಈ ಚುನಾವಣೆಯ ಫಲಿತಾಂಶ ಹಲವರಿಗೆ ಸಂಭ್ರಮ ತಂದಿರುತ್ತದೆ.ಸೋಲು ಕಂಡವರು ಅವರ ಬೆಂಬಲಿತರು ಭ್ರಮನಿರಸನಗೊಂಡಿದ್ದಾರೆ. ಆಯಾ ಕ್ಷೇತ್ರ-ಊರುಗಳಲ್ಲಿ ಸ್ಪರ್ಧಿಗಳಾಗಿದ್ದವರ ಹಾಗೂ ರಾಜಕೀಯ ಪಕ್ಷಗಳ ಕುರಿತಾಗಿ ಜನತೆ ಹೊಂದಿದ್ದ ಮನೋಭಾವ ಮತದ ರೂಪದಲ್ಲಿ ಪ್ರಕಟಗೊಂಡಿದೆ.

ಜಿಲ್ಲೆಯ ಮೂರು ಮತ ಎಣಿಕಾ ಕೇಂದ್ರಗಳಲ್ಲೂ ಭಾರೀ ಜನಸ್ತೋಮ ಕಂಡುಬAದಿತು. ಮಡಿಕೇರಿ ತಾಲೂಕಿನಲ್ಲಿ ವಿಜಯೋತ್ಸವದ ಅಬ್ಬರವಿಲ್ಲದೆ ಮತ ಎಣಿಕೆ ನಡೆದರೆ, ವೀರಾಜಪೇಟೆಯಲ್ಲಿ ವಿಜೇತರ ಸಂಭ್ರಮ ತುಸು ಹೆಚ್ಚಾಗಿತ್ತು. ಇನ್ನು ಕುಶಾಲನಗರ ಎಣಿಕಾ ಕೇಂದ್ರದಲ್ಲಿ (ಸೋಮವಾರಪೇಟೆ ತಾಲೂಕು) ಜನರ ಸಂಖ್ಯೆ ತೀರಾ ಹೆಚ್ಚಾಗಿದ್ದ ಪರಿಣಾಮ ಅಲ್ಲಿ ನೂಕು ನುಗ್ಗಲು ಸೃಷ್ಟಿಯಾಗಿತ್ತು.

ಈ ಗೊಂದಲದ ನಡುವೆ ಹೆಬ್ಬಾಲೆ ಕ್ಷೇತ್ರದ ಅಭ್ಯರ್ಥಿ ಚಂದ್ರಹಾಸ ಅವರು ಆಯತಪ್ಪಿ ಬಿದ್ದು ಕಾಲು ಮುರಿತಕ್ಕೊಳಗಾದ ಪ್ರಸಂಗವೂ ನಡೆದಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಇಲ್ಲಿ ಹರಸಾಹಸ ಪಡಬೇಕಾಯಿತಲ್ಲದೆ ಅಭ್ಯರ್ಥಿಗಳು, ಏಜೆಂಟರುಗಳೊAದಿಗೆ ಮಾತಿನ ಚಕಮಕಿಯನ್ನೂ ಎದುರಿಸಬೇಕಾಯಿತು. ಜನಜಂಗುಳಿಯೊAದಿಗೆ ವಾಹನ ದಟ್ಟಣೆಯೂ ಅಧಿಕವಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪತಿ-ಪತ್ನಿಯರಿಬ್ಬರು ಗೆಲುವು ಸಾಧಿಸಿರುವುದು, ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಕ್ಷೇತ್ರಕ್ಕೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಅವರು ಜಯ ಸಾಧಿಸಿದ್ದು ವಿಶೇಷವಾಗಿದೆ.

ಗರ್ವಾಲೆ ಕ್ಷೇತ್ರದ ಇಬ್ಬರು ಸ್ಪರ್ಧಿಗಳ ಮತ ಎಣಿಕೆಯನ್ನು ಮೂರು ಬಾರಿ ನಡೆಸಿದ ಪ್ರಸಂಗವೂ ವರದಿಯಾಗಿದೆ. ಮೂರನೇ ಬಾರಿಗೆ ಶಾಸಕ ಅಪ್ಪಚ್ಚು ರಂಜನ್ ಅವರೇ ಎಣಿಕೆ ಸಂದರ್ಭ ಖುದ್ದಾಗಿ ನಿಲ್ಲಬೇಕಾಯಿತು.

ಕುಶಾಲನಗರ ಮೂಲದ ಚುನಾವಣಾ ಅಧಿಕಾರಿಯೊಬ್ಬರು ಪಿರಿಯಾಪಟ್ಟಣದ ಮತ ಎಣಿಕಾ ಕೇಂದ್ರದಲ್ಲೇ (ಮೊದಲ ಪುಟದಿಂದ) ಅಸ್ವಸ್ಥಗೊಂಡು ಸಾವಿಗೀಡಾಗಿರುವ ದುರ್ಘಟನೆಯೂ ಸಂಭವಿಸಿದೆ. ಇನ್ನುಳಿದಂತೆ ಅಭ್ಯರ್ಥಿಗಳ ನಡುವಿನ ನೇರ ಸ್ಪರ್ಧೆಗಳು ಹಾವು-ಏಣಿಯಾಟದಂತೆ ನಡೆದು ಫಲಿತಾಂಶ ಭಾರೀ ಕುತೂಹಲ ಸೃಷ್ಟಿಸಿತ್ತು. ಈ ಚುನಾವಣಾ ಫಲಿತಾಂಶ ಮುಂದಿನ ಐದು ವರ್ಷಗಳ ತನಕದ ಗ್ರಾ.ಪಂ. ಆಡಳಿತಕ್ಕೆ ವೇದಿಕೆಯನ್ನು ಸೃಷ್ಟಿಸಿದ್ದು ಜನತೆ ಹೊಸ ಹೊಸ ನಿರೀಕ್ಷೆಗಳು ಅಭಿವೃದ್ಧಿಯ ಕನಸ್ಸನ್ನು ಕಾಣುವಂತಾಗಿದೆ. ಚುನಾವಣೆಯ ಫಲಿತಾಂಶ ಹಲವೆಡೆಗಳಲ್ಲಿ ಆಯಾ ವ್ಯಾಪ್ತಿಯ ಜನತೆಯ ನಿರೀಕ್ಷೆಯಂತೆ ಹೊರ ಬಿದ್ದಿದ್ದರೆ, ಕೆಲವರಿಗೆ ಅಚ್ಚರಿಯ ಸೋಲು-ಗೆಲುವು ಆಘಾತಕಾರಿಯಾಗಿಯೂ, ಚೇತೋಹಾರಿಯಾಗಿಯೂ ಪರಿಣಮಿಸಿದೆ.

ಜಿಲ್ಲೆಯ ಒಟ್ಟು ೧೦೧ ಗ್ರಾ.ಪಂ.ಗಳಿಗೆ ತಾ. ೨೨ ಹಾಗೂ ೨೭ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಕಳೆದ ಹಲವು ತಿಂಗಳ ಹಿಂದೆಯೇ ಕಳೆದ ಅವಧಿಯ ಅಧಿಕಾರ ಮುಕ್ತಾಯಗೊಂಡಿದ್ದರೂ ಕೊರೊನಾ ಕಾರಣದಿಂದಾಗಿ ಚುನಾವಣೆ ಮುಂದೂಡಲ್ಪಟ್ಟಿದ್ದರಿAದ ಆಗಿನಿಂದಲೇ ನಡೆದಿದ್ದ ಚುನಾವಣಾ ಕಸರತ್ತು-ಪೂರ್ವ ತಯಾರಿಯಿಂದಾಗಿ ಈ ಚುನಾವಣೆ ಭಾರೀ ಕುತೂಹಲ ಸೃಷ್ಟಿಸಿತ್ತು. ಮುಂದಿನ ಕೆಲವೇ ತಿಂಗಳಿನಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೂ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲೂ ಈ ಚುನಾವಣೆಗೆ ಇನ್ನಷ್ಟು ಹೆಚ್ಚಿನ ಮಹತ್ವ ಕಂಡುಬAದಿತ್ತು.ಕೆಲವಾರು ಪಂಚಾಯಿತಿಗಳಲ್ಲಿ ಕಳೆದ ಎರಡು ಮೂರು ಅವಧಿಗಳಿಂದಲೂ ಪ್ರತಿನಿಧಿಗಳಾಗಿದ್ದವರು ಅಧ್ಯಕ್ಷ-ಉಪಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದವರು ಸ್ಪರ್ಧೆಯಲ್ಲಿದ್ದರು. ಇವರೊಂದಿಗೆ ಹೊಸ ಮುಖಗಳು ಮೀಸಲಾತಿಯ ಅವಕಾಶದಡಿಯಲ್ಲಿ ಸ್ಪರ್ಧೆಗೆ ಇಳಿದವರು, ಈ ಹಿಂದೆ ತಾವು ಇದ್ದ ರಾಜಕೀಯ ಪಕ್ಷಗಳಿಂದ ಮುನಿಸಿಕೊಂಡು ಅದರಿಂದ ದೂರಾಗಿ ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡವರು, ಪರಸ್ಪರ ಒಳಜಗಳ, ಭಿನ್ನಾಭಿಪ್ರಾಯಗಳ ನಡುವೆ ಕಣಕ್ಕೆ ಇಳಿದಿದ್ದವರ ಸ್ಪರ್ಧೆಗಳಿಂದಾಗಿ ಕೌತುಕಮಯವಾಗಿದ್ದ ಚುನಾವಣೆಯ ಫಲಿತಾಂಶದೊAದಿಗೆ ಇದೀಗ ಎಲ್ಲವಕ್ಕೂ ತೆರೆಬಿದ್ದಂತಾಗಿದೆ.

ಮತ ಎಣಿಕೆಯ ಸುಸೂತ್ರ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಸಕಲ ವ್ಯವಸ್ಥೆ-ಮುಂಜಾಗ್ರತೆಯೊAದಿಗೆ ಕ್ರಮ ಕೈಗೊಂಡಿದ್ದು, ಮಡಿಕೇರಿ ತಾಲೂಕಿನ ಮತ ಎಣಿಕೆ ಮಡಿಕೇರಿ ಸಂತ ಜೋಸೆಫರ ಶಾಲೆಯಲ್ಲಿ ಸೋಮವಾರ ತಾಲೂಕಿನ ಎಣಿಕೆ ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ವೀರಾಜಪೇಟೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪ್ರಕ್ರಿಯೆ ಅಲ್ಲಿನ ಸಂತ ಅನ್ನಮ್ಮ ಕಾಲೇಜಿನಲ್ಲಿ ಬೆಳಿಗ್ಗೆ ೭ರಿಂದ ಆರಂಭಗೊAಡಿತು. ಎಣಿಕೆ ಪ್ರಾರಂಭವಾಗಿ ಕೆಲವೇ ಹೊತ್ತಿನಿಂದ ಒಂದೊAದಾಗಿ ಫಲಿತಾಂಶಗಳು ಹೊರ ಬೀಳಲಾರಂಭಿಸಿತು. ಆಯಾ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಜಮಾಯಿಸಿದ್ದ, ಅಭ್ಯರ್ಥಿಗಳ-ರಾಜಕೀಯ ಪಕ್ಷಗಳ ಬೆಂಬಲಿತರು ಫಲಿತಾಂಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದರು.

ಗೆಲುವಿನ ಓಟ ಹೊರಬೀಳುತ್ತಿದ್ದಂತೆಯೇ ಸಂಭ್ರಮಾಚರಣೆಗಳು ಕಂಡು ಬಂದರೆ, ಸೋಲು ಕಂಡವರ ಬೆಂಬಲಿಗರು ತಮ್ಮದೇ ವಿಶ್ಲೇಷಣೆಗಳೊಂದಿಗೆ ಮೆಲ್ಲ ಮೆಲ್ಲನೆ ಜಾಗ ಖಾಲಿ ಮಾಡುತ್ತಿದ್ದ ದೃಶ್ಯ ಕಂಡುಬAದಿತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸೇರಿದಂತೆ ಮತ ಎಣಿಕೆ ಪ್ರಕ್ರಿಯೆಗಾಗಿ ನಿಯೋಜಿತರಾಗಿದ್ದ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳು ಮತ ಎಣಿಕೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಯಶಸ್ವಿಯಾದರು.