ಗೋಣಿಕೊಪ್ಪ ವರದಿ, ಡಿ. ೨೯: ಕೇರಳದ ಉಳಿಕಲ್ನಲ್ಲಿ ನಡೆಯುವ ಬೈತೂರು ನಮ್ಮೆಗೆ ಕೊಡಗಿನ ದೇವರುಗಳು ಪಾಲ್ಗೊಳ್ಳಲು ಈ ಬಾರಿ ಕೊರೊನಾದಿಂದಾಗಿ ಅವಕಾಶ ರದ್ದುಪಡಿಸಿದ್ದು, ಆಯುಧ ಹೊತ್ತು ತೆರಳಿ ಪೂಜೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಶನಿವಾರ ದೇವಸ್ಥಾನದ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜನವರಿ ೨೨ ರಿಂದ ಜ. ೨೫ ರವರೆಗೆ ಕೇರಳದ ಉಳಿಕಲ್ನಲ್ಲಿ ನಡೆಯುವ ಬೈತೂರು ನಮ್ಮೆಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರಲು ಮಾತ್ರ ಅವಕಾಶ ನೀಡಲಾಗಿದೆ. ಭಕ್ತರು ದಿನದ ಮುಂಜಾನೆ ೫.೩೦ ಗಂಟೆಯಿAದ ರಾತ್ರಿ ೮ ಗಂಟೆವರೆಗೂ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ, ಒಂದು ಬಾರಿ ೪೦ ಭಕ್ತರಿಗೆ ಮಾತ್ರ ಅವಕಾಶ. ಅವರು ಹೊರ ಬಂದ ನಂತರ ಬೇರೆ ಭಕ್ತರು ದೇವಸ್ಥಾನ ಪ್ರವೇಶಿಸಬಹುದಾಗಿದೆ.
ಅಲ್ಲಿನ ಸರ್ಕಾರದ ಸೂಚನೆ ಯಂತೆ ಕೊಡಗಿನಿಂದ ತೆರಳುವ ಮೈಮೇಲೆ ದೇವರು ಬರುವವರು ಜ. ೧೪ ರಿಂದ ಜ. ೨೧ ರವರೆಗೆ ತೆರಳಿ ಆಯುಧವನ್ನು ಪೂಜೆ ಮಾಡಿ ಅಲ್ಲಿ ಉಳಿಯದಂತೆ ಮರಳಬೇಕಿದೆ. ಮೈಮೇಲೆ ದೇವರು ಬಂದು ಸೇರುವ ಹಬ್ಬ ಆಚರಣೆಗೆ ಅವಕಾಶವಿಲ್ಲ. ತೊಂಡಿಯAಡ, ಪುಗ್ಗೇರ, ಮತ್ತೂರು, ಹಾಕತ್ತೂರು ಭಾಗದ ಮೈಮೇಲೆ ಬರುವ ನಾಲ್ವರಿಗೆ ಸೇರಲು ಅವಕಾಶ ನೀಡಲಾಗಿದೆ. ಜನವರಿ ೨೨ ರಂದು ಮತ್ತು ೨೩ ರಂದು ನಡೆಯುವ ಪುಗ್ಗೇರ ಕುಟುಂಬದ ಹಾಗೂ ಕೇರಳದ ನಾಡಿನ ಎತ್ತುಪೋರಾಟಕ್ಕೆ ದೇವರಿಗೆ ಅಕ್ಕಿ ಸಮರ್ಪಿಸುವ ಕಾರ್ಯ ನಡೆಯಲಿದೆ. ಜ. ೨೩ ರಂದು ಅಲ್ಲಿನ ಅಘೋಶ ಕಮಿಟಿಯ ಸಾಂಸ್ಕೃತಿಕ ಕಾಯಕ್ರಮವನ್ನು ರದ್ದುಪಡಿಸಲಾಗಿದೆ.
ಜ. ೨೪ ರಂದು ಮಠಗಳಿಂದ ಆಗಮಿಸುತ್ತಿದ್ದ ನೈಯಾಟ್ಕಾರರು, ಅಭಿಷೇಕದ ತುಪ್ಪ ತರುತ್ತಿದ್ದ ಅವಕಾಶವನ್ನು ಒಂದು ಮಠಕ್ಕೆ ೪ ಜನರಿಗೆ ಅವಕಾಶ ನೀಡಲಾಗಿದೆ. ಆನೆ ಅಂಬಾರಿ ಹೊತ್ತು ದೇವಸ್ಥಾನದ ಏಳು ಸುತ್ತು ನಡೆಯುತ್ತಿದ್ದ ಪ್ರದಕ್ಷಿಣೆಯನ್ನು ರದ್ದುಪಡಿಸಿ, ಪೂಜಾರಿ ಮಾತ್ರ ದೇವರನ್ನು ಹೊತ್ತು ಪ್ರದಕ್ಷಿಣೆ ಹಾಕಬಹುದಾಗಿದೆ. ಕೈ ಭಂಡಾರವನ್ನು ಅಲ್ಲಿ ಇಟ್ಟಿರುವ ಪಾತ್ರೆಗೆ ಹಾಕಬಹುದಾಗಿದೆ. ಜ. ೧೪ ರಿಂದ ಜ. ೨೫ ರವರೆಗೆ ನಿತ್ಯಪೂಜೆ, ಮೃತ್ಯುಂಜಯ ಪೂಜೆ, ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಭಕ್ತರಿಗೆ ತೊಂದರೆಯಾಗದAತೆ ಗಡಿಯಲ್ಲಿ ದೇವಸ್ಥಾನದ ಅಧಿಕಾರಿ ವರ್ಗ ಕ್ರಮಕೈಗೊಳ್ಳಲಿದೆ.
ಆಚರಣೆಯಂತೆ ಬೈತೂರು ದೇವಸ್ಥಾನದಿಂದ ಕೋಮರತಜ್ಜ ಆಗಮಿಸಿ ಕೊಡಗಿನ ದೇವಸ್ಥಾನಗಳಿಗೆ ಮಾಹಿತಿ ನೀಡುವ ಆಚರಣೆಯನ್ನು ೪ ದಿನಕ್ಕೆ ಕಡಿತಗೊಳಿಸಿದೆ. ಡಿಸೆಂಬರ್ ೩೦ ರಂದು ಹೆಗ್ಗಳ ದೇವಸ್ಥಾನ, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನ, ಡಿ. ೩೧ ರಂದು ದೇವಣಗೇರಿ ಈಶ್ವರ ದೇವಸ್ಥಾನ, ತಲಕಟಕೇರಿ ಭಗವತಿ ದೇವಸ್ಥಾನ, ಹಾಲುಗುಂದ ಭಗವತಿ, ಮೈತಾಡಿ ಅಯ್ಯಪ್ಪ, ಜನವರಿ ೧ ರಂದು ಕುಂಜಿಲಗೇರಿ ಮುಕ್ಕಾಟೀರ ಐನ್ಮನೆ, ಕಡಂಗಮರೂರು ಭಗವತಿ, ಅರಮೇರಿ ಭಗವತಿ, ಕೆದಮುಳ್ಳೂರು ಈಶ್ವರ, ಜ. ೨ ರಂದು ಕದನೂರು ಭಗವತಿ, ಮಗ್ಗುಲ ಅಯ್ಯಪ್ಪ, ಪುಲಿಯಂಡ ಐನ್ಮನೆಯಲ್ಲಿ ತಂಗಲಿದೆ. ಜ. ೩ ರಂದು ಕೊಡಂದೇರ ಐನ್ಮನೆ, ಮಾಚೇಟ್ಟೀರ ಮನೆ ಕಾಳಿ ದೇವಿ, ಬಾಳುಗೋಡು ಭದ್ರಕಾಳಿ, ಅಮ್ಮಣಕುಟ್ಟಂಡ ಬೋಪಣ್ಣ ಅವರ ಐನ್ಮನೆಗೆ ಆಗಮಿಸಲಿದೆ.
ಹಿನ್ನೆಲೆ: ದೇವರನಾಡು ಕೇರಳವು ಕೊಡಗು ಜಿಲ್ಲೆಯ ಬಹುತೇಕ ದೇವಾನುದೇವತೆಯ ಮೂಲ ಸ್ಥಾನವಾಗಿದೆ. ಬಹುತೇಕ ದೇವರುಗಳು ಕೇರಳದಿಂದ ಕೊಡಗಿಗೆ ಬಂದಿದೆ ಎಂಬ ಇತಿಹಾಸವಿದೆ.
ಇದರಂತೆ ಕೇರಳದ ಬೈತೂರುವಿನಲ್ಲಿರುವ ಬೈತೂರು ಈಶ್ವರ ಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನಮ್ಮೆಯಲ್ಲಿ ಕೊಡಗಿನಿಂದ ನೂರಾರು ದೇವರುಗಳು ಅಲ್ಲಿಗೆ ತೆರಳಿ ಬೈತೂರಚ್ಚನಿಂದ ಆಶೀರ್ವಾದ ಪಡೆದು ಶಕ್ತಿ ಹೆಚ್ಚಿಸಿಕೊಳ್ಳುತ್ತವೆ ಎಂಬ ನಂಬಿಕೆ ಇದೆ. ಸುಮಾರು ೩ ಶತಮಾನದಿಂದಲೂ ಇದೇ ಆಚರಣೆ ನಡೆದುಕೊಂಡು ಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೈತೂರುವಿಗೆ ತೆರಳಿ ದೇವರ ಅನುಗ್ರಹ ಪಡೆಯುವ ಆಚರಣೆ ಇದೆ.
ಪೂಜಾ ರಶೀದಿಗೆ ಅವಕಾಶ: ದೇವಸ್ಥಾನಕ್ಕೆ ತೆರಳಲು ಆಗದ ಭಕ್ತರಿಗೆ ಮೃತ್ಯುಂಜಯ ಪೂಜೆ, ದೇವರ ಭಂಡಾರ, ಸಹಾಯಧನ, ನೈವೇದ್ಯ ಅಕ್ಕಿ, ತುಪ್ಪ, ಎಣ್ಣೆಯನ್ನು ನೀಡಲು ಜಿಲ್ಲೆಯ ಹಲವು ಕಡೆಗಳಲ್ಲಿ ಕೇಂದ್ರಗಳನ್ನು ಮಾಡಲಾಗಿದೆ. ಇಲ್ಲಿ ಹಣ ನೀಡಿ ರಶೀದಿ ಪಡೆಯ ಬಹುದಾಗಿದೆ. ವೀರಾಜಪೇಟೆಯ ಅಮ್ಮಣಕುಟ್ಟಂಡ ಕಿರಣ್, ವೀರಾಜಪೇಟೆ ಕೊಡವ ಸಮಾಜ ಕ್ಲಬ್ ಪುಗ್ಗೇರ ಮೊಣ್ಣಯ್ಯ, ವೀರಾಜಪೇಟೆ ವಿಶ್ವನಾಥ್, ಪೊನ್ನಂಪೇಟೆಯಲ್ಲಿ ಐನಂಡ ಬೋಪಣ್ಣ, ಗೋಣಿಕೊಪ್ಪದಲ್ಲಿ ಸಣ್ಣುವಂಡ ವಿನು ವಿಶ್ವನಾಥ್, ಜಮ್ಮಡ ಜಪ್ಪು, ಬೀರುಗ ಚೆಪ್ಪುಡಿಕೊಲ್ಲಿಯ ಚೆಕ್ಕೇರ ರಾಜಪ್ಪ, ಅಮ್ಮತ್ತಿಯ ಕುಟ್ಟಂಡ ಅಯ್ಯಪ್ಪ, ಮೂರ್ನಾಡುವಿನ ಪುದಿಯೊಕ್ಕಡ ರಮೇಶ್, ಬಡುವಂಡ ಬೋಪಣ್ಣ ಇವರುಗಳನ್ನು ಸಂಪರ್ಕಿಸ ಬಹುದಾಗಿದೆ.
ಕೊಡಗಿನ ಎಲ್ಲಾ ದೇವರುಗಳ ಅಪ್ಪನಾಗಿ ಕೇರಳದ ಉಳಿಕಲ್ನಲ್ಲಿರುವ ಬೈತೂರಚ್ಚ ದೇವರಿದೆ. ಇಲ್ಲಿಗೆ ವರ್ಷಂಪ್ರತಿ ದೇವರುಗಳ ಸಂಗಮವಾಗುತ್ತದೆ. ಈ ಬಾರಿ ಕೊರೊನಾದಿಂದಾಗಿ ದೇವರುಗಳ ಸಂಗಮಕ್ಕೆ ಅವಕಾಶವಿಲ್ಲ.
ಶನಿವಾರ ಕೇರಳದ ಉಳಿಕಲ್ನಲ್ಲಿರುವ ಶ್ರೀ ಆದಿ ಬೈತೂರಪ್ಪ ದೇವಸ್ಥಾನದಲ್ಲಿ ಉತ್ಸವ ಆಚರಿಸುವ ಬಗ್ಗೆ ಸಭೆ ನಡೆಸಲಾಗಿದೆ. ಪುಗ್ಗೇರ ತಕ್ಕ, ಕಲ್ಯಾಟ್ ಕುಟುಂಬ, ದೇವಸ್ಥಾನದ ಪಾರಂಪರ್ಯ ಟ್ರಸ್ಟಿ ವಿನೋದ್ ನಾಯರ್, ದೇವಸ್ಥಾನದ ಅಧಿಕಾರಿ, ತಂತ್ರಿ, ಹಳೇ ಟ್ರಸ್ಟಿಗಳು ಸಭೆ ಸೇರಿ ಸಾಂಪ್ರದಾಯಿಕವಾಗಿ ಆಚರಣೆ ಮಾಡಲು ನಿರ್ಧರಿಸ ಲಾಯಿತು. ಕೋವಿಡ್ ನಿಯಮದಂತೆ ಒಂದು ಬಾರಿ ೪೦ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಪುಗ್ಗೇರ ಕುಟುಂಬದ ತಕ್ಕರಾದ ಪುಗ್ಗೇರ ಪೊನ್ನಪ್ಪ, ಪ್ರಮುಖರಾದ ಪುಗ್ಗೇರ ರಂಜಿ ದೇವಯ್ಯ, ಮಾಳೇಟೀರ ರತ್ನ ಸುಬ್ಬಯ್ಯ, ಪುಗ್ಗೇರ ನಂದಾ ಸುಬ್ಬಯ್ಯ ತಿಳಿಸಿದ್ದಾರೆ.