ಬೆಂಗಳೂರು, ಡಿ. ೨೯: ಕರ್ನಾಟಕ ವಿಧಾನ ಪರಿಷತ್‌ನ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ‘ಡೆತ್‌ನೋಟ್’ ಬರೆದಿಟ್ಟು ಕಡೂರಿನ ಗುಣಸಾಗರದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇವರು ಜಿ.ಪಂ. ಸದಸ್ಯರಾಗಿ, ಶಾಸಕರಾಗಿ, ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾಗಿ, ವಿಧಾನ ಪರಿಷತ್‌ನ ಉಪ ಸಭಾಪತಿಯಾಗಿಯೂ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸೇವೆಯನ್ನು ಪರಿಗಣಿಸಿ ಸಹಕಾರಿ ರತ್ನ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.

ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ಜರುಗಿದ ಘಟನೆಯಿಂದ ಖಿನ್ನರಾಗಿದ್ದರೆಂದು ಹೇಳಲಾಗುತ್ತಿದ್ದು, ಅದರೊಂದಿಗೆ ಡಿ.ಸಿ.ಸಿ. ಬ್ಯಾಂಕ್‌ನ ಸೋಲು ಸಹ ಅವರನ್ನು ಕಂಗೆಡಿಸಿದ್ದು ಅವರು ಇತ್ತೀಚೆಗೆ ಭಾಗವಹಿಸಿದ ವೇದಿಕೆಗಳಲ್ಲಿ ಅಸಹನೆ ವ್ಯಕ್ತಪಡಿಸಿದ್ದು ಸಹ ಉಲ್ಲೇಖನೀಯ. ಮರಣ ಪತ್ರದಲ್ಲಿ ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಅರ್ಧಕ್ಕೆ ನಿಂತಿರುವ ಮನೆಯನ್ನು ಪೂರ್ಣಗೊಳಿಸುವಂತೆ, ಹಣಕಾಸು ವಿಚಾರಗಳ ಮಾಹಿತಿ ನೀಡಿ ತಮ್ಮ ಈ ಕೃತ್ಯವನ್ನು ಕ್ಷಮಿಸುವಂತೆ ಕೋರಿದ್ದಾರೆ.

ನಿನ್ನೆ ಬೆಂಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ನಡೆದ ಯುವಜನೋತ್ಸವ ಮತ್ತು ಆಧುನಿಕೃತ ಜಿಮ್‌ನ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೋಮವಾರ ನಾಲ್ಕು ಗಂಟೆ ವೇಳೆಗೆ ಸಕರಾಯಪಟ್ಟಣದ ತಮ್ಮ ತೋಟದ ಮನೆಗೆ ತೆರಳಿ ಅಲ್ಲಿಂದ ಬಾಣವಾರಕ್ಕೆ ತೆರಳಿ ‘ಡೆತ್‌ನೋಟ್’ನ್ನು ಸಿದ್ಧಪಡಿಸಿಕೊಂಡು ಜೊತೆಯಲ್ಲಿದ್ದ ಆಪ್ತ ಸಹಾಯಕ ಮತ್ತು ಬೆಂಗಾವಲು ಪಡೆಯ ಸಿಬ್ಬಂದಿಗೆ ಖಾಸಗಿ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆÀರಳಿದ್ದರು.

ಖಾಸಗಿ ಸ್ಯಾಂಟ್ರೋ ಕಾರಿನಲ್ಲಿ ತೆರಳಿದ ಧರ್ಮೇಗೌಡ ಕಡೂರಿನ ಗುಣಸಾಗರದ ಬಳಿ ಬಂದ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ. ತೆರಳಿ ಸುಮಾರು ಸಮಯ ಕಳೆದರೂ ಬಾರದ ಧರ್ಮೇಗೌಡರ ಬಗ್ಗೆ ಆತಂಕಗೊAಡ ಸಿಬ್ಬಂದಿ ಮೊಬೈಲ್‌ಗೆ ಕರೆ ಮಾಡಿದ ಸಂದರ್ಭದಲ್ಲಿ ‘ಸ್ವಿಚ್ ಆಫ್’ ಆಗಿತ್ತು.

ಇದರಿಂದ ವಿಚಲಿತರಾಗಿ ಹುಡುಕಾಟ ಶುರು ಮಾಡಿದಾಗ ರಾತ್ರಿ ಒಂದು ಗಂಟೆ ಸಮಯದಲ್ಲಿ ಗುಣಸಾಗರದ ಹತ್ತಿರದ ರೈಲ್ವೇ ಹಳಿಯ ಹತ್ತಿರ ದೇಹ ಮೂರು ತುಂಡಾಗಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಬಿ.ಜೆ.ಪಿ. ನಾಯಕ ಸಿ.ಟಿ. ರವಿ, ಬೆಳ್ಳಿ ಪ್ರಕಾಶ್, ಸ್ಥಳೀಯ ಮುಖಂಡರು, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್, ಜಿಲ್ಲಾಧಿಕಾರಿ ಬಗಾದಿ ಗೌತಮ್ ಭೇಟಿ ನೀಡಿ ಪರಿಶೀಲಿಸಿದರು.