ಸೋಮವಾರಪೇಟೆ, ಡಿ. ೨೮: ತಾ. ೨೨ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕೇಂದ್ರವನ್ನು ಕುಶಾಲನಗರಕ್ಕೆ ಸ್ಥಳಾಂತರಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ಕ್ಷೇತ್ರ ಸಮಿತಿ, ಮುಂದೆ ನಡೆಯುವ ಸ್ಥಳೀಯ ಚುನಾವಣೆಯ ಮತ ಎಣಿಕೆಯ ಕೇಂದ್ರವನ್ನು ಸೋಮವಾರಪೇಟೆ ಯಲ್ಲೇ ಮುಂದುವರೆಸಬೇಕೆAದು ಆಗ್ರಹಿಸಿದೆ.
ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸೋಮವಾರಪೇಟೆಯಲ್ಲೇ ನಡೆಯುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಪ್ರಮುಖರುಗಳೊಂದಿಗೆ ಚರ್ಚಿಸದೇ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ. ಈ ಕ್ರಮದಿಂದ ಎಲ್ಲರಿಗೂ ಅನಾನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯ ಮತ ಎಣಿಕೆ ಕೇಂದ್ರ ಸೋಮವಾರಪೇಟೆಯಲ್ಲೇ ಸ್ಥಾಪಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಚುನಾವಣೆ ಬಹಿಷ್ಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.