ಮಡಿಕೇರಿ ಡಿ.೨೯ : ಹೊಸ ವರ್ಷದ ಪ್ರಯುಕ್ತ ‘ಫೋರ್ ಸ್ಟಾರ್’ ಯುವಕ ಸಂಘದ ವತಿಯಿಂದ ತಾ. ೩೧ ರಂದು ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಕಾರಣಾಂತರ ಗಳಿಂದ ಜ. ೨ ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿ ಸಿ.ಎ.ಬಶೀರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಫೋರ್ ಸ್ಟಾರ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ೭ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಜ.೨ ರಂದು ಬೆಳಿಗ್ಗೆ ೧೧ ಗಂಟೆಗೆ ಎಡಪಾಲ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದರು.

ವಿಜೇತ ತಂಡಕ್ಕೆ ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಈಗಾಗಲೇ ೪೦ ತಂಡಗಳು ನೋಂದಾವಣಿ ಯಾಗಿದ್ದು, ತಾ. ೩೦ರಂದು (ಇಂದು) ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಎಂ.ಇ. ನಾಸಿರ್, ಪಿ.ಎಂ.ಸಾಬಿತ್, ಸಿ.ಹೆಚ್.ಝಕ್ರಿಯಾ ಹಾಗೂ ಕೆ.ಯು.ಹಾರಿಸ್ ಉಪಸ್ಥಿತರಿದ್ದರು.