ನಾಪೋಕ್ಲು, ಡಿ. ೨೭: ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಬಲ್ಲ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘವು ಕಾರ್ಯ ಪ್ರವೃತ್ತರಾಗಬೇಕು. ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಬಿ.ಎಂ. ಶಾರದ ಮಾತನಾಡಿ, ಉನ್ನತ ಶಿಕ್ಷಣ ಪಡೆದವರಿಂದ ಉತ್ತಮ ಸಮಾಜ ಹಾಗೂ ರಾಷ್ಟçನಿರ್ಮಾಣ ಸಾಧ್ಯ. ಗುರು-ಹಿರಿಯರಿಗೆ ಗೌರವ ನೀಡುವುದರೊಂದಿಗೆ ಸಾಧಕರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.

ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಅರೆಯಡ ಸೋಮಪ್ಪ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳಾದ ಬಾಳೆಯಡ ಪ್ರತೀಷ್ ಪೂವಯ್ಯ, ಕಲಿಯಂಡ ಅಚ್ಚಯ್ಯ, ಉದಿಯಂಡ ಉತ್ತಪ್ಪ, ಪುಲ್ಲೇರ ಸೋಮಯ್ಯ ಮತ್ತು ಕೇಲೇಟಿರ ಹರ್ಷಿತ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕ ಅಪ್ಪಾರಂಡ ಅಪ್ಪಯ್ಯ, ನಾಯಕಂಡ ದೀಪು ದೇವಯ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಕೇಲೇಟಿರ ಬೋಪಣ್ಣ, ದೀಪು ದೇವಯ್ಯ, ಕಲಿಯಂಡ ಕೌಶಿಕ್ ಸೇರಿದಂತೆ ಇನ್ನಿತರರು ಇದ್ದರು